ಮತೀಯವಾದದ ವಿರುದ್ಧ ತಿರುಗಿ ನಿಂತಿತಾ ಹಿಂದೂ ಸಮಾಜ..? ಕೊಳತ್ತಮಜಲು ಹತ್ಯೆಗೀಡಾದ ಅಬ್ದುಲ್ ರಹಿಮಾನ್ ಮನೆಗೆ ಸ್ಥಳೀಯ ಬಿಜೆಪಿ ಮುಖಂಡರು, ಹಿಂದೂ ಸಮುದಾಯದ ನಾಯಕರ ಭೇಟಿ

ಕರಾವಳಿ

ಶಾಸಕ ರಾಜೇಶ್ ನಾಯಕ್ ಇನ್ನಾದರೂ ಮನುಷ್ಯತ್ವ ಪ್ರದರ್ಶಿಸುತ್ತಾರೋ..?

ಕೊಂದು ಸಾಧಿಸುವ ಧರ್ಮವಾದರೂ ಯಾವುದು..? ಜೀವ ಕೊಡುವುದಕ್ಕೆ ನಮ್ಮ ಕೈಯಲ್ಲಿ ಆಗುವುದಿಲ್ಲ ಅಂದ ಮೇಲೆ ಕೊಲ್ಲೋದು ಯಾಕೆ? ಕೊಂದು ಬಿಟ್ಟು ಸಾಧಿಸುವುದಾದರೂ ಏನು.?

ಕೊಳತ್ತಮಜಲಿನಲ್ಲಿ ಅಮಾಯಕ ಅಬ್ದುಲ್ ರಹಿಮಾನ್ ನನ್ನು ಮತೀಯ ದ್ವೇಷಕ್ಕೆ ಪ್ರಾಣ ಸ್ನೇಹಿತರೇ ಕೊಂದು ಬಿಟ್ಟಿದ್ದರು‌. ಕೊಳತ್ತಮಜಲು ಕೋಮು ಸಾಮರಸ್ಯದ ಊರು. ಹಿಂದೂಗಳ ಶಾರದಾ ಮೆರವಣಿಗೆಗೆ ಇಲ್ಲಿನ ಮುಸ್ಲಿಂ ಬಾಂಧವರು ಪಾನಕ ಕೊಡುತ್ತಿದ್ದರು. ಮುಸ್ಲಿಮರ ಈದ್ ಮಿಲಾದ್ ಮೆರವಣಿಗೆಗೆ ಹಿಂದೂಗಳು ಸಿಹಿ ತಿಂಡಿ ವಿತರಿಸುತ್ತಿದ್ದರು. ಅಪ್ಪಟ ಜಾತ್ಯತೀತತೆಯ ಊರದು. ಕೋಮು ಸೋಂಕು ತಾಗದ ಊರನ್ನು ಬೆರಳೆಣಿಕೆಯ ಮತೀಯವಾದಿಗಳು ಕೆಡಿಸಿಬಿಟ್ಟರು. ಹತ್ಯೆಯಾದ ರಹಿಮಾನ್ ಹಿಂದೂ ಬಾಂಧವರೊಂದಿಗೆ ಅನ್ಯೋನ್ಯತೆಯಿಂದ ಇದ್ದ ಯುವಕನಾಗಿದ್ದ. ಊರಿನ ಜನತೆಗೆ ರಕ್ತ ಬೇಕಾದರೆ ಹಿಂದೂ ಮುಸ್ಲಿಂ ಭೇದಭಾವವಿಲ್ಲದೆ ರಕ್ತದಾನ ಮಾಡಿ ಜೀವದಾನಿಯಾಗುತ್ತಿದ್ದ. ದುರಂತ ಸಂಭವಿಸಿದಾಗ ಜಾತಿ ಭೇದವಿಲ್ಲದೆ ಎಲ್ಲರ ನೆರವಿಗೆ ಬರುತ್ತಿದ್ದ. ಹಂತಕ ದೀಪಕ್ ತಂದೆಯ ದೇಹದಲ್ಲೂ ರಹ್ಮಾನ್ ರಕ್ತವಿತ್ತು.‌ ರಹ್ಮಾನ್ ‌ಸಹೋದರ ಹನೀಫ್ ಇಲ್ಲಿ ನಡೆಯುವ ಶಾರದಾ ಮೆರವಣಿಗೆಗೆ ಉಚಿತ ವಾಹನ ನೀಡಿ, ತಾನೇ ಡ್ರೈವರ್ ಆಗಿ ಹೋಗುತ್ತಿದ್ದ. ಹಲವಾರು ಹಿಂದೂ ಕುಟುಂಬದ ಗರ್ಭಿಣಿ ಸ್ತ್ರೀಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ರಾತ್ರಿ ಹೊತ್ತು ಯಾರೂ ಮುಂದೆ ಬಾರದೆ ಇದ್ದಾಗ ಮಧ್ಯರಾತ್ರಿ ಎಂದು ನೋಡದೆ ತನ್ನ ವಾಹನದಲ್ಲೇ ಕರೆದುಕೊಂಡು ಹೋಗುತ್ತಿದ್ದ.

ಇಂತಹ ಸೌಹಾರ್ಧತೆಯನ್ನೇ ಉಸಿರಾಗಿಸಿಕೊಂಡಿತ್ತು ರಹ್ಮಾನ್ ಮತ್ತಾತನ ಕುಟುಂಬ. ಆದರೆ ಯಾರದ್ದೋ ದ್ವೇಷ ಭಾಷಣಕ್ಕೆ ಅಮಾಯಕ ರಹೀಂ ಜೀವ ತೆತ್ತಿದ್ದ.

ಮತೀಯವಾದ ಅನ್ನುವುದು ಸಮಾಜವನ್ನು ಒಡೆಯುವ ಮಾರಕ ರೋಗ. ಹಿಂದೂ -ಮುಸ್ಲಿಂ- ಕ್ರೈಸ್ತರ ಭಾತೃತ್ವದ ಮೂಲಕ ಮಾತ್ರ ಮತೀಯ ವಾದವನ್ನು ಸೋಲಿಸಲು ಸಾಧ್ಯ. ಸಮುದಾಯದೊಳಗಿರುವ ಐದು ಪರ್ಸೆಂಟ್ ಕೋಮು ಕ್ರಿಮಿಗಳಿಂದಾಗಿ ಇಡೀ ಸಮುದಾಯವೇ ಕಟಕಟೆಯಲ್ಲಿ ನಿಲ್ಲಬೇಕಾಗಿದೆ. ‌ ಎರಡೂ ಸಮುದಾಯದ ಪ್ರಜ್ಞಾವಂತರು, ಸಜ್ಜನರು, ಧಾರ್ಮಿಕ ಮುಖಂಡರು ಇನ್ನಾದರೂ ಮೌನ ಮುರಿದು ಮತೀಯವಾದದ ವಿರುದ್ಧ ಹೋರಾಡುವ ಸಂಕಲ್ಪ ಮಾಡಬೇಕಿದೆ.

ಕೊಳತ್ತಮಜಲು ಹಾಗೂ ಸುತ್ತಮುತ್ತಲಿನ ಬಿಜೆಪಿ ಮುಖಂಡರು ಹಾಗೂ ಹಿಂದೂ ಬಾಂಧವರ ನಿಯೋಗವೊಂದು ಇಂದು ಹತ್ಯೆಗೀಡಾದ ರಹಿಮಾನ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದೆ. ಇದು ಉತ್ತಮ ನಡೆ. ಹಿಂದೂ -ಮುಸ್ಲಿಂ ನಡುವೆ ಉಂಟಾಗಿರುವ ಅಪನಂಬಿಕೆಯನ್ನು ದೂರ ಮಾಡಲು ಇದು ಸಹಕಾರಿ. ಜೊತೆಗೆ ಮತೀಯವಾದಿಗಳಿಗೆ ಊರಿನ ಸಜ್ಜನ ಹಿಂದೂ ಬಾಂಧವರು ಸ್ಪಷ್ಟ ಸಂದೇಶ ನೀಡಿದಂತಾಗಿದೆ. ರಹ್ಮಾನ್ ಅಮಾಯಕ, ಆತನ ಹತ್ಯೆ ಮೂಲಕ ಹಿಂದೂ ಸಮುದಾಯದ ಹೀರೋ ಆಗಲು ಹೊರಟ ಕೆಲವು ವಿಕೃತ ಮನಸ್ಸಿನ ನಾಯಕರಿಗೆ ತಪರಾಕಿ ನೀಡಿದಂತಾಗಿದೆ.

ಬಡಗ ಬೆಳ್ಳೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಬಿಜೆಪಿ ಮುಖಂಡ ಪ್ರಕಾಶ್ ಆಳ್ವ ಗುಂಡಾಲ ನೇತೃತ್ವದಲ್ಲಿ ಹಿಂದೂ ಮುಖಂಡರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಬಂಟ್ವಾಳ ಬಿಜೆಪಿ ವಿಧಾನ ಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ದೇವಪ್ಪ ಪೂಜಾರಿ, ಸ್ಥಳೀಯ ಹಿಂದೂ ಮುಖಂಡರಾದ ಬಾಬಣ್ಣ ನಡ್ಯೋಡಿ, ಮೋಹನ್ ಶೆಟ್ಟಿ ನಡ್ಯೋಡಿ, ಶಾಕೇತ್ ಭಂಡಾರಿ ಪರಕೂರು, ಕೃಷ್ಣ ಶೆಟ್ಟಿ ಗುಂಡಾಲ ಸೇರಿದಂತೆ ಇಪ್ಪತ್ತೈದಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಮನುಷ್ಯತ್ವದ ಲವಲೇಶದ ಕಾಳಜಿ ಇದ್ದರೆ ಶಾಸಕ ರಾಜೇಶ್ ನಾಯಕ್ ತನ್ನ ಕ್ಷೇತ್ರದಲ್ಲಿ ನಡೆದ ಅಮಾಯಕ ರಹಿಮಾನ್ ಹತ್ಯೆಗೆ ಕನಿಷ್ಠ ಸಂತಾಪ ನೀಡಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಬೇಕಿದೆ. ಸ್ವತಹ: ರಹ್ಮಾನ್ ತಂದೆ ಅವರೇ ಶಾಸಕರು ಭೇಟಿ ನೀಡದೆ ತಾರತಮ್ಯ ವಹಿಸಿರುವ ಬಗ್ಗೆ ನೋವನ್ನು ತೋಡಿಕೊಂಡಿದ್ದರು. ಹತ್ಯೆಯಾದ ಅಮಾಯಕನ ಧರ್ಮದ ಕಾರಣಕ್ಕೆ ಕನಿಷ್ಠ ಸಂತಾಪ ಸೂಚಿಸದ ರಾಜೇಶ್ ನಾಯಕ್ ಮನುಷ್ಯತ್ವದ ಲವಲೇಶ ಇದ್ದರೆ ಕುಟುಂಬವನ್ನು ಭೇಟಿ ಮಾಡುವ ತೀರ್ಮಾನ ಮಾಡಬೇಕಿದೆ.‌ ಇಲ್ಲವಾದರೆ ಧರ್ಮದ ನಶೆ ತುಂಬಿದ ಹಂತಕರಿಗೂ, ಇವರಿಗೂ ಯಾವುದೇ ವ್ಯತ್ಯಾಸ ಕಾಣದು.