ಗಂಜಿಮಠ ಶಬ್ನಂ ಖಾದರ್ ಆಳ್ವಾಸ್ ಮಿಜಾರ್ ಬಳಿ ಡಿಬಿಲ್ ಕಂಪನಿಯ ಬೇಜವಾಬ್ದಾರಿತನಕ್ಕೆ ಬಲಿಯಾದರು
ಬಿಕರ್ನಕಟ್ಟೆ -ಸಾಣೂರು ರಾಷ್ಟ್ರೀಯ ಹೆದ್ದಾರಿ 169 ನಲ್ಲಿ ಡಿಬಿಲ್ ಕಂಪನಿಯ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಗೆ ಅದೆಷ್ಟೋ ಜೀವಗಳು ಬಲಿಯಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿ ಒಂದೇ ಮಳೆಗೆ ಬಟಾಬಯಲಾಗಿದೆ. ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಬಿಲ್ ಕಂಪನಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ರಾಡಿ ಎಬ್ಬಿಸಿದಷ್ಟು ಬೇರೆ ಯಾವುದೇ ಕಂಪನಿಯ ಕಾಮಗಾರಿ ಇಷ್ಟೊಂದು ವಿವಾದಕ್ಕೆ ಕಾರಣವಾಗಿಲ್ಲ ಅನ್ನಬಹುದು.
ಮೇ ತಿಂಗಳ ಕೊನೆಯ ವಾರದಲ್ಲಿ ಸುರಿದ ಭಾರಿ ಮಳೆಗೆ ಎಡಪದವಿನ ಆಣೆ ಬಳಿಯಿರುವ ಬಳ್ಳಾಲ್ ಹೆಂಚಿನ ಕಾರ್ಖಾನೆ ಬಳಿ ಗುಡ್ಡ ಕುಸಿದು ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮ್ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ವಿದ್ಯುತ್ ಸಲಕರಣೆಗಳು ನೂರು ಅಡಿ ಆಳಕ್ಕೆ ಕುಸಿದು ಬಿದ್ದಿತ್ತು.

ಇನ್ನು ಕೆತ್ತಿಕಲ್ ಬಳಿ ಮಣ್ಣು ಮಾಫಿಯಾದವರ ಕರಾಳತೆಗೆ ಸಿಲುಕಿ ಗುಡ್ಡವನ್ನು ಅವೈಜ್ಞಾನಿಕವಾಗಿ ಕೊರೆದು ದೊಡ್ಡ ಅನಾಹುತಕ್ಕೆ ಡಿಬಿಎಲ್ ಕಂಪನಿ ಕಾರಣವಾಗಿದೆ. ಇಲ್ಲಿನ ಕಾಮಗಾರಿ ಬಗ್ಗೆ ಖುದ್ದು ಉಸ್ತುವಾರಿ ಸಚಿವರೇ ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ, ಗಣಿ ಇಲಾಖೆಗೆ ಕ್ಯಾಕರಿಸಿ ಉಗಿದಿದ್ದರು. ವರ್ಷದ ಹಿಂದೆ ಶಿರೂರು ದುರಂತ ನಡೆಯಲು ಗುಡ್ಡವನ್ನು ಅವೈಜ್ಞಾನಿಕವಾಗಿ ಕೊರೆದಿದ್ದೇ ಕಾರಣವಾಗಿತ್ತು. ಶಿರೂರು ಗಿಂತಲೂ ಭಯಾನಕವಾಗಿ ಕೆತ್ತಿಕಲ್ ನಲ್ಲಿ ಗುಡ್ಡ ಅಗೆಯಲಾಗಿದೆ. ಇನ್ನು ಮಳೆಗಾಲದಲ್ಲಿ ದೊಡ್ಡ ದುರಂತಕ್ಕೆ ಆಹ್ವಾನ ನೀಡುವಂತೆ ಗುಡ್ಡ ಕುಸಿಯುತ್ತಿದೆ. ಇಲ್ಲಿನ ಹೆದ್ದಾರಿ ಬಿರುಕು ಬಿಟ್ಟು ಅಪಾಯ ಆಹ್ವಾನಿಸುವಂತೆ ಬಾಯ್ತೆರೆದು ನಿಂತಿದೆ. ಗುಡ್ಡ ಕುಸಿಯದಂತೆ ತಡೆಯಲು ಹೊಸ ತಂತ್ರಜ್ಞಾನ ಬಳಸಿ ಕೋಟಿ ಕೋಟಿ ಖರ್ಚು ಮಾಡಿ ತಡೆ ಬೇಲಿ ನಿರ್ಮಿಸಲಾಗಿತ್ತು. ಸುರಿದ ಒಂದೇ ಮಳೆಗೆ ತಡೆ ಬೇಲಿ ಮಣ್ಣು ಪಾಲಾಗಿದೆ. ಖರ್ಚು ಮಾಡಿದ ದುಡ್ಡು ನೀರಲ್ಲಿಟ್ಟ ಹೋಮದಂತಾಗಿದೆ. ಡಿಬಿಎಲ್ ಕಂಪನಿಯ ಕಾಮಗಾರಿ ಯಾವ ರೀತಿ ಇದೆ ಅನ್ನುವುದಕ್ಕೆ ಕೆತ್ತಿಕಲ್ ಕಾಮಗಾರಿಯೇ ಸಾಕ್ಷಿ.
ಡಿಬಿಎಲ್ ಕಂಪೆನಿಯವರು ಮುನ್ನೆಚ್ಚರಿಕೆ ವಹಿಸದೆ ಸಿಕ್ಕ ಸಿಕ್ಕ ಕಡೆ ರಸ್ತೆ ಅಗೆಯುತ್ತಿರುವುದರಿಂದ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದು ಇದೆ. ಎರಡು ದಿನದ ಹಿಂದೆಯಷ್ಟೇ ಮಿಜಾರು ಆಳ್ವಾಸ್ ಕಾಲೇಜಿನ ಬಳಿ ಗಂಜಿಮಠ ಮಳಲಿ ಕ್ರಾಸಿನ ನಿವಾಸಿ ಶಬ್ನಂ ಖಾದರ್ ಎಂಬುವವರು ಡಿಬಿಎಲ್ ಕಂಪನಿಯವರ ಬೇಜವಾಬ್ದಾರಿತನಕ್ಕೆ ಜೀವ ಕಳೆದುಕೊಳ್ಳುವಂತಾಗಿದೆ. ಅವೈಜ್ಞಾನಿಕವಾಗಿ ರಸ್ತೆ ಅಗೆದು ಬೃಹತ್ ಹೊಂಡ ನಿರ್ಮಿಸಿ ಯಾವುದೇ ಸೂಚನಾ ಫಲಕ ಅಳವಡಿಸದ ಕಾರಣ ಬೈಕ್ ಸವಾರರಾಗಿದ್ದ ಶಬ್ನಂ ಖಾದರ್ ರಾತ್ರಿ ಹೊತ್ತು ಸಂಚರಿಸುತ್ತಿದ್ದಾಗ ಬೃಹತ್ ಹೊಂಡಕ್ಕೆ ಬಿದ್ದು ದುರ್ಮರಣಕ್ಕೀಡಾಗಿದ್ದಾರೆ. ಈ ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿಗೆ ಹಲವಾರು ಅಮಾಯಕ ಪ್ರಯಾಣಿಕರು ಜೀವ ತೆತ್ತದ್ದು ಇದೆ. ಅಪಘಾತಕ್ಕೆ ಕಾರಣವಾದದ್ದು ಇದೆ. ಇದು ವ್ಯವಸ್ಥೆಯೇ ನಡೆಸುವ ಕೊಲೆಯಲ್ಲವೇ. ಉಚ್ಚ ನ್ಯಾಯಾಲಯಗಳ ಆದೇಶದಂತೆ ಇಂತಹ ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕಿದೆ. ಆಗ ಮಾತ್ರ ಇಂತಹ ಅಮಾಯಕರ ಸಾವು ಕೊನೆಯಾಗಬಹುದು.
ಇತ್ತೀಚೆಗೆ ಉಳ್ಳಾಲದಲ್ಲಿ ರಸ್ತೆ ನಿರ್ಮಿಸಲು ಅವೈಜ್ಞಾನಿಕವಾಗಿ ಗುಡ್ಡ ಅಗೆದ ಪರಿಣಾಮ ಮಳೆಗೆ ಗುಡ್ಡ ಕುಸಿದು ಮನೆಯಲ್ಲಿ ಮಲಗಿದ ನಾಲ್ಕು ಅಮಾಯಕ ಜೀವಗಳು ಬಲಿಯಾಗಿದ್ದವು. ಅದರಲ್ಲೂ ಇಬ್ಬರು ಪುಟ್ಟ ಕಂದಮ್ಮಗಳು ಅನ್ನುವುದು ದುರ್ದೈವ. ಇಂತಹ ಸಾವಿಗೆ ನ್ಯಾಯ ಕೊಡುವವರು ಯಾರು? ಮಿಜಾರು ಬಳಿ ತನ್ನದಲ್ಲದ ತಪ್ಪಿಗೆ ಜೀವ ಕಳೆದುಕೊಂಡಿರುವುದಕ್ಕೆ ವ್ಯವಸ್ಥೆಯೇ ನೇರ ಹೊಣೆಯಲ್ಲವೇ? ಪ್ರಜ್ಞಾವಂತರು ಈ ಬಗ್ಗೆ ಧ್ವನಿ ಎತ್ತಬೇಕಿದೆ.
