ಬಂಟ್ವಾಳ ಬಡ್ಡಕಟ್ಟೆಯಲ್ಲಿ ಎ.ಬಿ ಸುಪಾರಿ ಅಂಗಡಿಯನ್ನು ಹೊಂದಿರುವ ನಾವೂರು ಮೈಂದಾಳ ನಿವಾಸಿ ನೌಫಾಲ್ ಎಂಬಾತ ಕೃಷಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದು, ಇದೀಗ ಐವತ್ತಕ್ಕೂ ಅಧಿಕ ಕೃಷಿಕರು ತಮ್ಮ ಹಣಕ್ಕಾಗಿ ಬಂಟ್ವಾಳ ನಗರ ಠಾಣೆಯ ಮೆಟ್ಟಿಲೇರಿದ ಘಟನೆ ವರದಿಯಾಗಿದೆ.

ಸ್ಥಳೀಯ ಕೃಷಿಕರ ವಿಶ್ವಾಸಾರ್ಹ ವರ್ತಕನಾಗಿದ್ದ ನೌಫಾಲ್ ಜೊತೆಗೆ ಇಲ್ಲಿನ ಕೃಷಿಕರು ಎರಡು ಮೂರು ದಶಕಗಳಿಂದ ವ್ಯವಹಾರ ನಡೆಸುತ್ತಿದ್ದರು, ಒಣ ಅಡಿಕೆಯನ್ನು ನೀಡುತ್ತಿದ್ದರು. ಈವರೆಗೂ ತನ್ನ ವ್ಯವಹಾರದಲ್ಲಿ ಪಾರದರ್ಶಕತೆ ಹೊಂದಿದ್ದು ಕೃಷಿಕರ ಮನ ಗೆದ್ದಿದ್ದ. ಕೃಷಿಕರಿಗೆ ಅಗತ್ಯಕ್ಕೆ ತಕ್ಕಂತೆ ಹಣವೂ ನೀಡುತ್ತಿದ್ದ.
ಸ್ಥಳೀಯ ಕೃಷಿಕರ ಮನೆ ಮನೆಗೆ ತೆರಳಿ ಅಡಿಕೆ ಸಂಗ್ರಹಿಸಿ ಬಂಟ್ವಾಳ ಬಡ್ಡಕಟ್ಟೆಯಲ್ಲಿರುವ ದಾಸ್ತಾನಿನಲ್ಲಿ ಶೇಖರಿಸಿಡುತ್ತಿದ್ದ. ಆದರೆ ಇದೀಗ ಏಕಾಏಕಿ ಮೊಬೈಲ್ ಸ್ವಿಚ್ ಆಫ್ ಮಾಡಿ, ಅಂಗಡಿಗೆ ಬೀಗ ಹಾಕಿ ಪರಾರಿಯಾಗಿದ್ದು ಸ್ಥಳೀಯ ಕೃಷಿಕರ ಆತಂಕಕ್ಕೆ ಕಾರಣವಾಗಿದೆ. ಒಬ್ಬೊಬ್ಬ ಕೃಷಿಕನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದು, ಒಟ್ಟು ಮೊತ್ತ ಹತ್ತು ಕೋಟಿ ರೂಪಾಯಿ ವಂಚಿಸಿರುವುದಾಗಿ ಅಡಿಕೆ ವ್ಯಾಪಾರಿ ನೌಫಾಲ್ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.

ಸ್ಥಳೀಯ ಕೃಷಿಕ ಮಹಿಳೆಯೊಬ್ಬಳು ತಮ್ಮ ಬ್ಯಾಂಕ್ ಸಾಲದ ಪಾವತಿ ಮೊತ್ತದ ಹಿನ್ನೆಲೆಯಲ್ಲಿ ಅಡಿಕೆ ವ್ಯಾಪಾರಿ ಬಳಿ ಹಣಕ್ಕಾಗಿ ಹೋದಾಗ ಆತ ಪರಾರಿಯಾಗಿರುವ ವಿಷಯ ಗಮನಕ್ಕೆ ಬಂದಿದ್ದು, ಈತನಿಂದ ವಂಚನೆಗೊಳಗಾದ ಕೃಷಿಕರು ತಂಡೋಪತಂಡವಾಗಿ ಠಾಣೆಯ ಮುಂದೆ ಜಮಾಯಿಸಿದ ಘಟನೆ ನಡೆದಿದೆ.
