ಮಂಗಳೂರು-ಬೆಂಗಳೂರು ಪೆಟ್ರೋಲಿಯಂ ಸರಭರಾಜು ಪೈಪ್‌ಲೈನ್ ಗೆ ಕನ್ನ ಕೊರೆದು ಕಳ್ಳತನ, ಪ್ರಕರಣ ದಾಖಲು; ಕಳ್ಳತನಕ್ಕೆ ಬಳಸಿದ ಪರಿಕರ, ಟ್ಯಾಂಕರ್ ಪೊಲೀಸರ ವಶ

ಕರಾವಳಿ

ಎಂಆರ್ ಪಿ ಎಲ್ ನ ಪೈಪ್‌ ಲೈನ್‌ ಕನ್ನ ಕೊರೆದು ಪೆಟ್ರೋಲ್‌ ಕಳ್ಳತನ ಮಾಡುತ್ತಿದ್ದ ಘಟನೆ ಚಿಕ್ಕಮಗಳೂರಿನ ಗೋಣಿಬೀಡು, ಹಿರೇಶಿಗರ ಎಂಬಲ್ಲಿ ಬೆಳಕಿಗೆ ಬಂದಿದೆ. ಹಾಸನ ಮಾರ್ಗವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್‌ ಸಾಗಿಸುವ ಪೈಪ್‌ಲೈನ್ ಸರಭರಾಜಿನಲ್ಲಿ ಸುಮಾರು 2 ಸಾವಿರ ಲೀಟರ್‌ ಪೆಟ್ರೋಲ್‌ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ ಎಂದು ಎಂಆರ್‌ಪಿಎಲ್‌ ಕಂಪನಿಯ ಮಾಹಿತಿ ಮೇರೆಗೆ ಕಂಪನಿ ಅಧಿಕಾರಿಗಳು ಗೋಣಿಬೀಡು ಪೊಲೀಸರ ಸಹಾಯ ಪಡೆದು ಪರಿಶೀಲಿಸಿದ್ದಾರೆ.

ಈ ಸಂದರ್ಭ ಹಿರೇಶಿಗರ ಬಳಿ ನಂಬರ್‌ ಪ್ಲೇಟ್‌ ಇಲ್ಲದ ಪೆಟ್ರೋಲ್‌ ಸಾಗಿಸುವ ಟ್ಯಾಂಕರ್‌ ಕಂಡುಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲಾರಿ ಚಾಲಕ ಹಾಗೂ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಟ್ಯಾಂಕರ್ ಲಾರಿಯೊಳಗೆ ಸುಮಾರು ಒಂದೂವರೆ ಸಾವಿರ ಲೀಟರ್‌ ಪೆಟ್ರೋಲ್‌ ತುಂಬಿಸಲಾಗಿತ್ತೆಂದು ಹೇಳಲಾಗುತ್ತಿದ್ದು, ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಮತ್ತು ಹೇಗೆ ಕಳವು ಮಾಡುತ್ತಿದ್ದರು ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

ಕೃತ್ಯಕ್ಕೆ ಬಳಸಿರುವ ಲಾರಿ ಮತ್ತು ಪೈಪ್‌ ಪರಿಕರಗಳನ್ನು ಗೋಣಿಬೀಡು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳ್ಳತನ ಪ್ರಕರಣದಲ್ಲಿ ಕೆಲ ಸ್ಥಳೀಯರು ಪಾಲ್ಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟದಲ್ಲಿದ್ದಾರೆ. ಈ ಹಿಂದೆಯೂ ಹಲವು ಬಾರಿ ಪೆಟ್ರೋಲ್‌ ಕಳ್ಳತನ ಪ್ರಕರಣಗಳು ನಡೆದಿದ್ದವು. ಪೈಪ್‌ಲೈನ್‌ ಗೆ ಕನ್ನ ಕೊರೆದು ಕಳ್ಳತನ ಮಾಡಿದ್ದ ಪ್ರಕರಣ ನಡೆದಿದ್ದವು. ಪೆಟ್ರೋಲ್‌ ಕಳ್ಳತನಕ್ಕೆ ಬಳಸಿದ ಪರಿಕರಗಳನ್ನು, ಟ್ಯಾಂಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.