ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚೆನ್ನರಾಯಪಟ್ಟಣದ 13 ಗ್ರಾಮಗಳ ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿರುವುದರ ವಿರುದ್ದ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು ಕರ್ನಾಟಕ ರಾಜ್ಯ ಸರಕಾರವು ರಾಜ್ಯ ಮಟ್ಟದ ರೈತ ಕಾರ್ಮಿಕ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಇಂದು(26-06-2025) ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಕ್ಲಾಕ್ ಟವರ್ ಬಳಿಯಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ನಾಯಕರಾದ ಕೆ ಯಾದವ ಶೆಟ್ಟಿಯವರು, ಮಣ್ಣಿನ ಮಗ, ರೈತನ ಮಗನೆಂದು ಬೊಗಳೆ ಬಿಟ್ಟು ರೈತರ ಹೆಸರಿನಲ್ಲಿ ರಾಜಕಾರಣ ನಡೆಸಿ ಅಧಿಕಾರಕ್ಕೇರಿದ ಕಾಂಗ್ರೆಸ್ ಮುಲಾಜಿಲ್ಲದೆ ರೈತರ ಭೂಮಿಯನ್ನು ಕಬಳಿಸಲು ಹೊರಟಿದೆ.ಕಳೆದ 1180 ದಿನಗಳಿಂದ ನಿರಂತರವಾಗಿ ಹೋರಾಟದಲ್ಲಿ ನಿರತರಾದ ರೈತರ ಬಳಿ ಮಾತನಾಡುವ ಕನಿಷ್ಠ ಸೌಜನ್ಯವೂ ರಾಜ್ಯ ಸರಕಾರಕ್ಕಿಲ್ಲದೆ ಇರುವುದು ಅತ್ಯಂತ ಖಂಡನೀಯ ವಿಚಾರವಾಗಿದೆ ಎಂದು ಹೇಳಿದರು.

AITUC ಜಿಲ್ಲಾ ನಾಯಕರಾದ ಬಿ. ಶೇಖರ್ ರವರು ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರ ಸಂಕಷ್ಟವನ್ನು ಅರಿಯದ ಕಾಂಗ್ರೆಸ್ ಸರಕಾರ ರಾಜ್ಯದ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡಲು ಭಾರೀ ಉತ್ಸುಕವಾಗಿದೆ. ದೇಶದ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ತುತ್ತೂರಿ ಬಾರಿಸುವುದರಲ್ಲಿ ಕಾಂಗ್ರೆಸ್ ಬಿಜೆಪಿಯ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಕಳೆದ ಬಿಜೆಪಿ ಸರಕಾರ ಅಧಿಕಾರದಲ್ಲಿರುವಾಗಲೇ ಬೀದಿಗಿಳಿದ ದೇವನಹಳ್ಳಿಯ ರೈತರು ತಮ್ಮ ಭೂಮಿಯ ರಕ್ಷಣೆಗಾಗಿ ಬಿಜೆಪಿ ಸರಕಾರದ ವಿರುದ್ಧ ಪ್ರಬಲವಾಗಿ ಹೋರಾಡಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ಬಿಜೆಪಿ ಮಾಡಿದ ರೈತ ವಿರೋಧಿ ತೀರ್ಮಾನವನ್ನು ಧಿಕ್ಕರಿಸಿ ರೈತರಿಗೆ ನ್ಯಾಯ ನೀಡುವ ಬದಲು ಅದೇ ತೀರ್ಮಾನವನ್ನು ಮುಂದುವರಿಸುವುದಾದರೆ ರೈತರ ಭೂಮಿಯ ಪ್ರಶ್ನೆಯಲ್ಲಿ ಕಾಂಗ್ರೆಸ್ ನ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ರಾಜ್ಯ ರೈತ ಸಂಘದ ಜಿಲ್ಲಾ ನಾಯಕರಾದ ಸನ್ನಿ ಡಿಸೋಜ, CITU ಜಿಲ್ಲಾ ನಾಯಕರಾದ ಸುಕುಮಾರ್ ತೊಕ್ಕೋಟು, AITUC ಜಿಲ್ಲಾ ನಾಯಕರಾದ ಸೀತಾರಾಮ ಬೇರಿಂಜರವರು ಮಾತನಾಡಿದರು. ಪ್ರತಿಭಟನೆಯಲ್ಲಿ CITU ನಾಯಕರು, AITUC ಮುಖಂಡರು, AIKS ನಾಯಕರು, DYFI ಮುಖಂಡರು, ರಾಜ್ಯ ರೈತ ಸಂಘದ ನಾಯಕರು, ಮಹಿಳಾ ಸಂಘಟನೆಯ ನಾಯಕಿಯರು, ದಲಿತ ನಾಯಕರು, ಪ್ರಗತಿಪರ ಚಿಂತಕರು, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಬೀದಿಬದಿ ವ್ಯಾಪಾರಸ್ಥರ ಸಂಘದ ನಾಯಕರು ಉಪಸ್ಥಿತರಿದ್ದರು.
