ಬೆಂದೂರ್ವೆಲ್ನಲ್ಲಿ ಹೈರ್ಗ್ಲೋ ಎಲಿಗಂಟ್ ಓವರ್ಸೀಸ್ ಇಂಟರ್ನ್ಯಾಷನಲ್ (ಪ್ರೈ) ಲಿಮಿಟೆಡ್ ಎಂಬ ಕಚೇರಿ, 286 ಜನರಿಗೆ ಮೋಸ, 4.5 ಕೋಟಿ ರೂ. ವಂಚನೆ
ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ಹೇಳಿ ನಂಬಿಸಿ ಮಂಗಳೂರು ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ಮುಂಬೈನ ಇಬ್ಬರು ಆರೋಪಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಂಬೈ ನಿವಾಸಿಗಳಾದ ದಿಲ್ಶಾದ್ ಅಬ್ದುಲ್ ಸತ್ತಾರ್ ಖಾನ್ (45), ಹಾಗೂ ಸಾಹುಕಾರಿ ಕಿಶೋರ್ ಕುಮಾರ್ ಯಾನೆ ಅನಿಲ್ ಪಾಟೀಲ್ (34) ಬಂಧಿತ ಆರೋಪಿಗಳು.
ಮಂಗಳೂರಿನ ಬೆಂದೂರ್ವೆಲ್ನಲ್ಲಿ ಹೈರ್ಗ್ಲೋ ಎಲಿಗಂಟ್ ಓವರ್ಸೀಸ್ ಇಂಟರ್ನ್ಯಾಷನಲ್ (ಒಪಿಸಿ) ಪ್ರೈವೇಟ್ ಲಿಮಿಟೆಡ್ ಎಂಬ ಕಚೇರಿಯನ್ನು ತೆರೆದು. ವಿದೇಶಗಳಲ್ಲಿ ಉದ್ಯೋಗಗಳಿಗೆ ಕೆಲಸದ ವೀಸಾಗಳನ್ನು ಒದಗಿಸುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿ ಉದ್ಯೋಗಾಕಾಂಕ್ಷಿಗಳಿಗೆ ನಂಬಿಕೆ ಬರುವಂತೆ ಮಾಡಿ ಅವರಿಂದ ಲಕ್ಷಾಂತರ ಹಣವನ್ನು ಪಡೆದುಕೊಂಡು ವೀಸಾ ನೀಡದೆ ಮೋಸ ಮಾಡಿದ್ದಾರೆ. ಸುಮಾರು 286 ಜನರಿಗೆ 4ಕೋಟಿ 50ಲಕ್ಷ ರೂ. ವಂಚನೆ ಮಾಡಿದ್ದಾರೆ. ಆದರೆ ಅವರಿಗೆ ಯಾವುದೇ ವೀಸಾ ಕೂಡ ನೀಡಲಾಗಿಲ್ಲ.
ಈ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 75/2025 ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 316(2), 318(4) ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಹಿಂದಿನ ಕಾರ್ಯಾಚರಣೆಯಲ್ಲಿ, ಸಿಸಿಬಿ ಮುಂಬೈ ನಿವಾಸಿ ಮಸಿಹುಲ್ಲಾ ಖಾನ್ ಎಂಬ ಆರೋಪಿಯನ್ನು ಬಂಧಿಸಿತ್ತು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
