ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳು ಸವಾಲ್.. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಪ್ರಕರಣಗಳ ಸಂಖ್ಯೆ, ಶಿಕ್ಷೆ ಪ್ರಮಾಣ ಭಾರಿ ಕಡಿಮೆ

ರಾಜ್ಯ

5 ವರ್ಷಗಳಲ್ಲಿ 16,663 ಪೋಕ್ಸೋ ಪ್ರಕರಣಗಳು ದಾಖಲು. ಬರೀ 688 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ

ವರ್ಷದಿಂದ ವರ್ಷಕ್ಕೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದೆ. ಆದರೆ ಪೋಕ್ಸೋ ಪ್ರಕರಣದಲ್ಲಿ ಸಜೆಯಾಗುತ್ತಿರುವ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 16,663 ನೈಜ ಪೋಕ್ಸೋ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 688 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದೆ.

2020-2025 ಏಪ್ರಿಲ್ ವರೆಗೆ ರಾಜ್ಯದಲ್ಲಿ 17,426 ಪೋಕ್ಸೋ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 16,663 ಪ್ರಕರಣಗಳನ್ನು ನೈಜ ಪೋಕ್ಸೋ ಪ್ರಕರಣವೆಂದು ಗುರುತಿಸಲಾಗಿದೆ. 2020 ರಲ್ಲಿ 2075 ನೈಜ ಪೋಕ್ಸೋ ಪ್ರಕರಣಗಳು ವರದಿಯಾಗಿದ್ದವು. 2021 ರಲ್ಲಿ 2,756, 2022 ರಲ್ಲಿ 3,056, 2023 ರಲ್ಲಿ 3,672 ಹಾಗೂ 2024 ರಲ್ಲಿ 3,790 ಪ್ರಕರಣಗಳು ದಾಖಲಾಗಿವೆ. ಈ ವರ್ಷದ ನಾಲ್ಕು ತಿಂಗಳಲ್ಲೇ 1,330 ನೈಜ ಕೇಸ್ ಗಳು ದಾಖಲಾಗಿವೆ. ಒಬ್ಬನೇ ಒಬ್ಬ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ.

ಶಿಕ್ಷೆ ಪ್ರಮಾಣದಲ್ಲಿ ಭಾರಿ ಇಳಿಕೆ

ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿಗಳಿಗೆ ಸಜೆಯಾಗುವ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. 2020 ರಲ್ಲಿ 167 ಪ್ರಕರಣದಲ್ಲಿ ಸಜೆಯಾಗಿದ್ದರೆ 2021 ರಲ್ಲಿ 216, 2022 ರಲ್ಲಿ 169, 2023 ರಲ್ಲಿ 110 ಮತ್ತು 2024 ರಲ್ಲಿ 26 ಪ್ರಕರಣಗಳಲ್ಲಿ ಸಜೆಯಾಗಿದೆ.

ಉಳಿದಂತೆ ಪೋಕ್ಸೋ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಪೈಕಿ ಐದು ವರ್ಷ ನಾಲ್ಕು ತಿಂಗಳಲ್ಲಿ 6,053 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ. ಅಲ್ಲದೇ 55 ಪ್ರಕರಣಗಳಲ್ಲಿ ಅಪರಾಧಿಯೇ ಪತ್ತೆಯಾಗಿಲ್ಲ. ಹಾಗೆಯೇ 21 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದ್ದರೆ 115 ಪ್ರಕರಣಗಳನ್ನು ಇತರ ಮಾರ್ಗದಲ್ಲಿ ಇತ್ಯರ್ಥ ಮಾಡಲಾಗಿದೆ. ಉಳಿದಂತೆ 122 ಪ್ರಕರಣಗಳನ್ನು ನ್ಯಾಯಾಲಯ ಹಂತದಲ್ಲಿ ವಜಾಗೊಳಿಸಲಾಗಿದೆ.