ಹಿರಿಯ ನ್ಯಾಯವಾದಿ , ಮಾಜಿ ಸಂಸದ ವಿ.ಎಸ್ ಉಗ್ರಪ್ಪರವರ ನೇತೃತ್ವದ ಮಹಿಳಾ ಮತ್ತು ಮಕ್ಕಳ ಮೇಲಿನ ಅತ್ಯಾಚಾರ , ಕೊಲೆ , ದೌರ್ಜನ್ಯ ತಡೆ ಸಮಿತಿ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ನೂರಾರು ಮಹಿಳೆಯರ, ಮಕ್ಕಳ ಕೊಲೆ, ಅತ್ಯಾಚಾರ, ಅಸಹಜ ಸಾವುಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ತನ್ನ ವರದಿಯಲ್ಲಿ ನೀಡಿರುವ ಎಲ್ಲಾ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರ ತಕ್ಷಣ ಜಾರಿಗೊಳಿಸುವ ಮೂಲಕ ಬದ್ದತೆ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.

ಇಡೀ ರಾಜ್ಯಾದ್ಯಂತ ಮಹಿಳೆಯರ , ಮಕ್ಕಳ ಮೇಲಿನ ಕೊಲೆ, ಅತ್ಯಾಚಾರ, ದೌರ್ಜನ್ಯಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರವೇ ನೇಮಿಸಿದ ಸಮಿತಿಯು , ಇಡೀ ರಾಜ್ಯಾದ್ಯಂತ ಪ್ರವಾಸಗೈದು ಅಧಿಕಾರಿಗಳು, ಸಂಘಸಂಸ್ಥೆಗಳ ಮುಖಂಡರ ಜೊತೆಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ಈ ಸಮಿತಿಯ ಸಭೆಯಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಸೌಜನ್ಯ ಕೊಲೆ, ಅತ್ಯಾಚಾರ ಪ್ರಕರಣ ಸೇರಿದಂತೆ 500 ಕ್ಕೂ ಹೆಚ್ಚಿನ ಅಸಹಜ ಸಾವುಗಳ ಬಗ್ಗೆ ಗಂಭೀರವಾದ ಚರ್ಚೆ ನಡೆದಿದೆ. ಈ ವಿಚಾರಗಳನ್ನು ಗಂಭೀರ ತೆಗೆದುಕೊಂಡ ಸಮಿತಿಯು ಧರ್ಮಸ್ಥಳದ ನಡೆಯುವ ಈ ಅಮಾನವೀಯ ಪರಿಸ್ಥಿತಿಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಹಲವಾರು ಪ್ರಮುಖ ಶಿಫಾರಸ್ಸುಗಳನ್ನು ವರದಿಯಲ್ಲಿ ಉಲ್ಲೇಖಿಸಿದೆ. ಆದರೂ ಇಂದಿಗೂ ರಾಜ್ಯ ಸರ್ಕಾರ ಈ ಗಂಭೀರ ಸ್ವರೂಪದ ಘಟನೆಗಳ ಬಗ್ಗೆ ಮೌನ ವಹಿಸಿರುವುದು ಅತ್ಯಂತ ನೋವಿನ ಸಂಗತಿ. ರಾಜ್ಯ ಸರ್ಕಾರ ತಕ್ಷಣ ವಿ.ಎಸ್ ಉಗ್ರಪ್ಪ ಸಮಿತಿಯ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು.

ಧರ್ಮಸ್ಥಳಕ್ಕೆ ದಿನನಿತ್ಯ ಸಾವಿರಾರು ಭಕ್ತರು ಆಗಮಿಸಿ, ಅವರಾಗಿಯೇ ಸ್ವಯಂ ಪ್ರೇರಿತವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಮಾತುಗಳು ಮೂರ್ಖತನವಾಗಿದೆ. ದೇಶದಾದ್ಯಂತ ನೂರಾರು ದೇವಸ್ಥಾನಗಳಿಗೆ ದಿನನಿತ್ಯ ಸಾವಿರಾರು ಜನರು ಭಾಗವಹಿಸುತ್ತಿದ್ದರೂ ಧರ್ಮಸ್ಥಳಲ್ಲೇಕೆ ಮಾತ್ರ ಅಸಹಜ ಸಾವುಗಳು ಸಂಭವಿಸುತ್ತದೆ.? ಈ ಸಾವುಗಳ ಹಿಂದೆ ದೊಡ್ಡ ಷಡ್ಯಂತ್ರವಿದೆ. 10 ರಿಂದ 45 ವರ್ಷದೊಳಗಿನ ಮಕ್ಕಳ ಮತ್ತು ಮಹಿಳೆಯರ ಅಸಹಜ ಸಾವುಗಳು ಆಘಾತಕಾರಿಯಾಗಿದ್ದು, ಯಾವುದೇ ಅಸಹಜ ಸಾವುಗಳ ಹಿಂದಿನ ಷಡ್ಯಂತ್ರ, ರಹಸ್ಯವನ್ನು ಭೇದಿಸಲು ಪೋಲೀಸ್ ಇಲಾಖೆ ವಿಫಲವಾಗಿದೆ. ಒಂದೇ ಒಂದು ಪ್ರಕರಣಗಳಲ್ಲಿ ಒಬ್ಬನೇ ಒಬ್ಬ ಆರೋಪಿಯನ್ನು ಬಂಧಿಸದಿರುವುದರ ಹಿಂದೆ ಕಾಣದ ಕೈಗಳ ಕೈವಾಡವಿದೆಯೇ ಅಥವಾ ಪೋಲಿಸ್ ಇಲಾಖೆ ಅಷ್ಟೊಂದು ಹದಗೆಟ್ಟಿದೆಯೇ ಎಂಬ ಅನುಮಾನ ಉಂಟಾಗಿದೆ. ಇಂತಹ ಘಟನೆ ಇಡೀ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಮಾಣದಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ಕೊಲೆ, ಅತ್ಯಾಚಾರ, ಅಸಹಜ ಸಾವಿಗೀಡಾದ ಹಿಂದು ಮಹಿಳೆಯರ, ಮಕ್ಕಳ ಬಗ್ಗೆ ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ, ಸಂಘಪರಿವಾರದ ಮೌನ ಸಂಶಯವನ್ನು ಹುಟ್ಟು ಹಾಕಿದೆ. ಹಿಂದುತ್ವ ಎಂದರೆ ಹಿಂದೂಗಳ ಸಾವಿನಲ್ಲಿ ಇತರ ಧರ್ಮದವರು ಇರಬೇಕು ಎಂಬ ಸಿದ್ದಾಂತವೇ.? ರಾಜ್ , ಕೇಂದ್ರ ಸರ್ಕಾರಕ್ಕೆ ಅಮಾಯಕ ಜನರ ಅಸಹಜ ಸಾವುಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ಇಡೀ ಪ್ರಕರಣಗಳನ್ನು ತಡೆಯಲು ಮಹಿಳಾ ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ಕೊಲೆ ಮತ್ತು ದೌರ್ಜನ್ಯ ತಡೆ ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು .
