ರಾಜ್ಯದ ಮುಖ್ಯಮಂತ್ರಿಯನ್ನು ಟೀಕಿಸಬಹುದು. RSS ನಾಯಕರನ್ನು ಟೀಕಿಸಿದರೆ ಜೈಲುಭಾಗ್ಯ ಗ್ಯಾರಂಟಿ: ಶೇಖರ್ ಲಾಯಿಲ
ನನಗೂ, ಮಹೇಶ್ ಶೆಟ್ಟಿ ತಿಮಾರೋಡಿ ಅವರಿಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಆದರೆ ಬಿ.ಎಲ್ ಸಂತೋಷ್ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯನ್ನು ನಿಂದಿಸಿದ ಏಕೈಕ ಕಾರಣಕ್ಕಾಗಿ ಬೆಳ್ಳಂಬೆಳಗೆ ಮನೆಗೆ ನುಗ್ಗಿ, ಪೋಲಿಸ್ ಠಾಣೆಗೆ ಕರೆದೊಯ್ದು, ಬಂಧಿಸಿ, ಜೈಲಿಗಟ್ಟಿರುವ ಘಟನೆ ಅತ್ಯಂತ ಖಂಡನೀಯವಾದುದು.
ಇಲ್ಲಿ ಮುಖ್ಯ ಪ್ರಶ್ನೆ ಬಿ.ಎಲ್ ಸಂತೋಷ ಯಾರು ಎಂಬುದು. ಆತ RSS ನ ನಾಯಕನಾಗಿ, ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅಷ್ಟೇ. ಜೀವಮಾನದಲ್ಲಿ ಒಂದೇ ಒಂದು ಬಾರಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಯಂತು ಅಲ್ಲ. ಆ ವ್ಯಕ್ತಿಯನ್ನು ನಿಂದನೆ ಮಾಡಿದರೆಂದು ಆಕಾಶವೇ ಕಳಚಿ ಬಿದ್ದಂತೆ ವರ್ತಿಸುವ ಅಗತ್ಯ ಏನಿತ್ತು ? ಅದೂ ಅಲ್ಲದೇ ರಾಜ್ಯದಲ್ಲಿರುವುದು ಪಕ್ಕಾ ಕಾಂಗ್ರೆಸ್ ಪಕ್ಷದ ಆಡಳಿತ. ಇಲ್ಲಿ ರಾಜ್ಯದ ಮುಖ್ಯಮಂತ್ರಿಯನ್ನು ಕೊಲೆಗಾರ ಎಂದರೂ ತಪ್ಪಾಗಲಾರದು. ಆದರೆ ಬಿಜೆಪಿ, ಸಂಘಪರಿವಾರದ ನಾಯಕರ ವಿರುದ್ಧ ಮಾತನಾಡಿದರೆ ಮಾತ್ರ ತಪ್ಪಾಗುತ್ತದೆ. ಇಂದಿನ ಘಟನೆಯಿಂದ ಸಾಮಾನ್ಯ ಜನರ ಸಾಮಾನ್ಯ ಪ್ರಶ್ನೆ ಇಷ್ಟೇ “ರಾಜ್ಯದ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು RSS ನಿಯಂತ್ರಿಸುತ್ತದೆಯೇ..?”
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವೇಶ್ಯವಾಟಿಕೆ ದಂಧೆಯ ಕೆರೆಹಳ್ಳಿ ಎಂಬ ಕೊಲೆಗಾರನಿಗೆ ರಾಜ್ಯ ಮರ್ಯಾದೆ ಸಿಕ್ಕಿದೆ. ಆತ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮತ್ತು ಮುಸ್ಲಿಂ ಸಮುದಾಯವನ್ನು ದಿನನಿತ್ಯ ಬಾಯಿಗೆ ಬಂದಂತೆ ನಿಂದಿಸಬಹುದು, ಕಲ್ಲಡ್ಕ ಏನೂ ಮಾಡಿದರೂ, ಮಾತನಾಡಿದರೂ ನಡೆಯುತ್ತದೆ. ಶ್ರೀಕಾಂತ್ ಶೆಟ್ಟಿ ಎಂಬಾತ ಕೊಲೆಗೆ ಮತ್ತೊಂದು ಕೊಲೆ ಎಂದು ಭಾಷಣ ಮಾಡಿದ ನಂತರ ಭೀಕರ ಕೊಲೆ ಮಾಡಬಹುದು. ಪಂಪ್ವೆಲ್ ಕೊಲೆಯನ್ನು ನಾವೇ ಮಾಡಿಸಿದ್ದು ಎಂದು ಬಹಿರಂಗವಾಗಿ ಹೇಳಿಕೆ ನೀಡಬಹುದು. ಪವರ್ ಟಿವಿ ಮಾಲೀಕ ರಾಜ್ಯ ಸರ್ಕಾರವನ್ನು, ಹೋರಾಟಗಾರರನ್ನು ಅವ್ಯಾಚ್ಯವಾಗಿ ನಿಂದಿಸಬಹುದು. ಮಹಾನ್ ಸುಳ್ಳುಗಾರ ಸೂಳಿಬೆಲೆ ಕಾಂಗ್ರೆಸ್ ಪಕ್ಷ ಸೇರಿದಂತೆ ಸಚಿವರುಗಳನ್ನು ನಿಂದಿಸಬಹುದು. ಗಿಳಿಯಾರ್ ಎಂಬ ಪೊರ್ಕಿ ಧರ್ಮದ ಹೆಸರಿನಲ್ಲಿ ಮತ್ತೊಂದು ಧರ್ಮವನ್ನು, ನಂಬಿಕೆಯನ್ನು ನಿಂದಿಸಬಹುದು. ಬೆಳ್ತಂಗಡಿಯ ಕ್ರಿಮಿನಲ್ ಪೂಂಜಾ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರು 24 ಹಿಂದೂಗಳನ್ನು ಕೊಲೆ ಮಾಡಿದ್ದಾರೆ ಎಂದು ಬಹಿರಂಗವಾಗಿ ಟೀಕಿಸಿದರೂ ಇಲ್ಲಿ ಅವರಿಗೆಲ್ಲ ರಾಜಾಮರ್ಯಾದೆ. ಆದರೆ RSS ನಾಯಕ ಬಿ.ಎಲ್ ಸಂತೋಷರನ್ನು ಟೀಕಿಸಿದರೆ ಜೈಲುಭಾಗ್ಯ ಗ್ಯಾರಂಟಿ.!
ಈ ರೀತಿಯ ನ್ಯಾಯವನ್ನು ಕರ್ನಾಟಕ ರಾಜ್ಯದಲ್ಲಿ ಒಪ್ಪಲು ಸಾಧ್ಯವಿಲ್ಲ. ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಿನ್ನೆಯ ತನಕ ನಾವು ಕೇಳುತ್ತಿದ್ದ ಅನ್ಯಾಯವನ್ನು ಇಂದು ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯದಲ್ಲಿ ಕಣ್ಣಾರೆ ನೋಡಿದ್ದೇವೆ. ಇದು ಸಂವಿಧಾನದ ಕಗ್ಗೊಲೆ. ನ್ಯಾಯದ ಮೇಲಿನ ಅತ್ಯಾಚಾರಕ್ಕೆ ಸಮ. ಇತ್ತೀಚಿಗೆ ಗಿಳಿಯಾರ್ ಎಂಬಾತ ಧರ್ಮಸ್ಥಳ ಗ್ರಾಮದ ಗ್ರಾಮ ನಕ್ಷೆಯನ್ನು ದುರುಪಯೋಗ ಮಾಡಿಕೊಂಡು ಧರ್ಮಸ್ಥಳ ದೇವಸ್ಥಾನದ ಸುತ್ತಮುತ್ತಲೂ ಮಸೀದಿಗಳನ್ನು ಅನಧಿಕೃತವಾಗಿ ಸೃಷ್ಟಿಸಿ, ಧರ್ಮ ಧರ್ಮಗಳ ನಡುವೆ ಅಪನಂಬಿಕೆ ಹುಟ್ಟಿಸಿ, ಗಲಭೆ ಸೃಷ್ಟಿಸಲು ಹುನ್ನಾರ ನಡೆಸಿದ ಬಗ್ಗೆ ದೂರು ನೀಡಿದ್ದು, ಅದರಂತೆ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಗಿಳಿಯಾರ್ ಮೇಲೆ ಬಿಎನ್ಎಸ್- 2023 ರ 196(1)(a) , 353(2) ರಂತೆ ಪ್ರಕರಣ ದಾಖಲಿಸಲಾಗಿದೆ. ಆದರೆ ಗಿಳಿಯಾರ್ ಬಂಧನವಿಲ್ಲ ಏಕೆ.? ವಸಂತ ಗಿಳಿಯಾರ್ ಧರ್ಮ ಸಂರಕ್ಷಣಾ ಸಮಾವೇಶದ ಹೆಸರಿನಲ್ಲಿ ಬಹಿರಂಗವಾಗಿ ಓಡಾಡುತ್ತಿದ್ದರೂ ಆತನ ಬಂಧನವಿಲ್ಲ ಎಂದಾದರೆ ಮಹೇಶ್ ಶೆಟ್ಟಿ ತಿಮಾರೋಡಿರವರ ಬಂಧನದ ಹಿಂದಿರುವ ಷಡ್ಯಂತ್ರ, ಪಿತೂರಿ ಅರ್ಥವಾಗುತ್ತದೆ ಅಲ್ಲವೇ…?
