ಲಕ್ಕಿ ಸ್ಕೀಂ ಹೆಸರಿನಲ್ಲಿ ಬಂಪರ್ ಬಹುಮಾನ, ಕಟ್ಟಿದ ಹಣದ ಮೌಲ್ಯಕ್ಕೆ ತಕ್ಕುದಾದ ವಸ್ತುಗಳನ್ನು ನೀಡುವ ಆಮಿಷ ಒಡ್ಡಿ ಸಾವಿರಾರು ಸಂಖ್ಯೆಯ ಜನರಿಂದ ಕೋಟಿ, ಕೋಟಿ ಹಣ ಸಂಗ್ರಹಿಸಿದ ಲಕ್ಕಿ ಸ್ಕೀಂ ಗಳಲ್ಲಿ ಕೆಲವೊಂದು ಆಯೋಜಕರು ಸ್ಕೀಂ ಕೊನೆಗೊಂಡ ತರುವಾಯ ವಸ್ತುಗಳನ್ನು ನೀಡದೆ ವಂಚಿಸಿರುವುದು ವರದಿಯಾಗಿದೆ. ಸಂತ್ರಸ್ತರು ನೀಡಿದ ದೂರಿನ ಆಧಾರದಲ್ಲಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಶೈನ್ ಹಾಗು ನ್ಯೂ ಇಂಡಿಯಾ ಸ್ಕೀಂ ಆಯೋಜಕರನ್ನು ಬಂಧಿಸಿರುತ್ತಾರೆ. ಸುರತ್ಕಲ್ ಪೊಲೀಸರ ಕ್ರಮವನ್ನು ಸಿಪಿಐಎಂ ಸ್ವಾಗತಿಸುತ್ತದೆ, ಅದೇ ಸಂದರ್ಭ, ಸಂತ್ರಸ್ತರಿಗೆ ಹಣ ಮರಳಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ದ.ಕ. ಉಡುಪಿ ಹಾಗು ಹತ್ತಿರದ ಜಿಲ್ಲೆಗಳನ್ನು ಕೇಂದ್ರೀಕರಿಸಿ ಲಕ್ಕಿಸ್ಕೀಂ ಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿವೆ. ಏಜಂಟರುಗಳ ಮೂಲಕ ಹತ್ತಾರು ಸಾವಿರ ಜನರನ್ನು ಸದಸ್ಯರನ್ನಾಗಿಸಿ ನೂರಾರು ಕೋಟಿ ರೂಪಾಯಿ ಗಳನ್ನು ಸಂಗ್ರಹಿಸಿವೆ. ಪ್ರತಿ ತಿಂಗಳ ಡ್ರಾದಲ್ಲಿ ಆಯ್ಕೆಯಾದ ಅಧೃಷ್ಟಶಾಲಿಗಳಿಗೆ ಮನೆ, ಫ್ಲಾಟ್, ಐಷಾರಾಮಿ ಕಾರುಗಳನ್ನು ಬಹುಮಾನವಾಗಿ ವಿತರಿಸುವುದು, ಕೊನೆಯ ತಿಂಗಳಲ್ಲಿ ಬಾಕಿ ಉಳಿದವರಿಗೆ ಅವರು ಕಟ್ಟಿದ ಮೌಲ್ಯದಷ್ಟು ಹಣದ ವಸ್ತುಗಳನ್ನು ನೀಡುವುದು ಈ ಸ್ಕೀಂ ಗಳಿಗೆ ಇರುವ ಆಕರ್ಷಣೆ. ಆಯೋಜಕರ ಆಕರ್ಷಕ ಮಾತುಗಳು, ಸ್ಥಳೀಯವಾದ ಪರಿಚಿತ ಏಜಂಟರು, ಸ್ಕೀಂ ನಡೆಸುವವರ ದಾನ, ಧರ್ಮದ ಚಾರಿಟಿಗಳು, ದುಬಾರಿ ವೆಚ್ಚದ ಕ್ರೀಡಾಕೂಟ, ಸಾಮೂಹಿಕ ವಿವಾಹಗಳು, ಕಣ್ಣು ಕುಕ್ಕುವ ರೀತಿಯ ಐಷಾರಾಮಿ ನಡವಳಿಕೆಗಳು, ವೇದಿಕೆಗಳಲ್ಲಿ ಪ್ರಭಾವಿ ರಾಜಕಾರಣಿಗಳು, ಜನಪ್ರತಿನಿಧಿಗಳು, ಜನಪ್ರಿಯ ನಟರು, ಸಾಮಾಜಿಕ ಜಾಲತಾಣದ ಸೆಲೆಬ್ರಿಟಿಗಳು, ಧಾರ್ಮಿಕ ಕ್ಷೇತ್ರದ ಮುಂದಾಳುಗಳನ್ನು ಕರೆಸಿ ವಿಜೃಂಭಿಸುವ ಮೂಲಕ ಕಡಿಮೆ ಆದಾಯದ ಜನ ಸಾಮಾನ್ಯರನ್ನು ಈ ಸ್ಕೀಂಗಳು ಸುಲಭವಾಗಿ ಬಲೆಗೆ ಕೆಡವಿಕೊಂಡಿವೆ. ಕೃತಕ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿವೆ.
ಯಾವುದೆ ಪ್ರಾಧಿಕಾರಗಳಿಂದ ಸರಿಯಾದ ಅನುಮತಿಗಳನ್ನು ಪಡೆಯದೆ, ಕಾನೂನಿನ ದುರ್ಬಲ ಅಂಶಗಳನ್ನು ಬಳಸಿಕೊಂಡು ನಡೆಸಿರುವ ಸ್ಕೀಂ ಗಳ ಕುರಿತು ಸಂಬಂಧ ಪಟ್ಟ ಇಲಾಖೆಗಳು ಆಯಾಯ ಸಂದರ್ಭದಲ್ಲಿ ಯಾವುದೆ ಕ್ರಮಗಳನ್ನು ಕೈಗೊಳ್ಳದಿರುವುದು ಈಗ ನೂರಾರು ಕೋಟಿಗಳ ದೊಡ್ಡ ಮಟ್ಟದ ವಂಚನೆ ನಡೆಸಲು, ಸಾಮಾನ್ಯ ಜನತೆ ಹಣ ಕಳೆದುಕೊಳ್ಳಲು ಕಾರಣವಾಗಿದೆ.
ಈಗ ಒಂದಿಬ್ಬರು ಸಂತ್ರಸ್ತರು ನೀಡಿದ ದೂರಿನ ಬಳಿಕ ಸುರತ್ಕಲ್ ಠಾಣಾಧಿಕಾರಿಗಳು ಯಾವುದೆ ಪ್ರಭಾವಗಳಿಗೆ ಮಣಿಯದೆ ಶೈನ್ ಹಾಗು ನ್ಯೂ ಇಂಡಿಯಾ ಸ್ಕೀಂಗಳ ಆಯೋಜಕರನ್ನು ಬಂಧಿಸಿ ಸರಿಯಾದ ಕಾನೂನು ಕ್ರಮಗಳನ್ನು ಜರುಗಿಸಿದ್ದಾರೆ. ಆದರೆ, ತಮ್ಮ ಶ್ರಮದ ದುಡಿಮೆಯ ಹಣವನ್ನು ತೊಡಗಿಸಿರುವ ಸಂತ್ರಸ್ತರಿಗೆ ಅವರು ಕಟ್ಟಿದ ಹಣ ಮರಳಿ ಸಿಗುವ ಸಾಧ್ಯತೆಗಳು ಕಾಣುತ್ತಿಲ್ಲ.

ಈ ಎರಡು ಸ್ಕೀಂ ಗಳಲ್ಲದೆ, ಇದೇ ಮಾದರಿಯ, ಅಥವಾ ಬೇರೆ ರೂಪದ 50 ಕ್ಕೂ ಹೆಚ್ಚು ಲಕ್ಕಿ ಸ್ಕೀಂ ಗಳು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿವೆ. ಅಗಾಧ ಪ್ರಮಾಣದ ಹಣಕಾಸು ಸಂಗ್ರಹ ಮಾಡಿವೆ. ಈ ಸ್ಕೀಂ ಗಳಲ್ಲಿ ಹಣ ತೊಡಗಿಸಿಕೊಂಡವರಿಗೆ ಈಗ ಆತಂಕ ಕಾಡತೊಡಗಿವೆ.
ಜಿಲ್ಲಾಡಳಿತ ಈ ಕುರಿತು ಗಮನ ಹರಿಸಿ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ಲಕ್ಕಿ ಸ್ಕೀಂಗಳನ್ನು ಪರಿಶೀಲನೆಗೆ ಒಳಪಡಿಸಬೇಕು, ಅವರ ಹೂಡಿಕೆಗಳ ದಾಖಲೆ ಪಡೆದು ನಿಗಾ ವಹಿಸಬೇಕು.ಈಗಾಗಲೇ ಬಾಗಿಲು ಎಳೆದಿರುವ, ಮೊಕದ್ದಮೆ ದಾಖಲಾಗಿರುವ, ಅಥವಾ ವಂಚನೆಯ ಸಾಧ್ಯತೆ ಇರುವ ಪ್ರಕರಣಗಳಲ್ಲಿ, (ಅಗತ್ಯ ಬಿದ್ದಲ್ಲಿ ನ್ಯಾಯಾಲಯದ ಅನುಮತಿ ಪಡೆದು) ಸಮಿತಿಯೊಂದನ್ನು ರಚಿಸಬೇಕು, ವಂಚಕ ಸ್ಕಿಂ ಗಳ ಹೂಡಿಕೆಗಳನ್ನು ಪತ್ತೆ ಹಚ್ಚಿ ಅವುಗಳ ಮಾರಾಟದಿಂದ ಬರುವ ಹಣವನ್ನು ಸಂತ್ರಸ್ತರಿಗೆ ಅವರು ಪಾವತಿ ಮಾಡಿದ ಮೌಲ್ಯಗಳಿಗೆ ಅನುಗುಣವಾಗಿ ವಿತರಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.
ಇದಲ್ಲದೆ, ವಂಚನೆಯ ಸಾಧ್ಯತೆಯ ಅರಿವಿದ್ದೂ, ಇಂತಹ ವಂಚಕ ಲಕ್ಕಿಸ್ಕೀಂಗಳ ವೇದಿಕೆ ಹತ್ತಿದ, ಪ್ರಮೋಷನ್ ಮಾಡಿದ, ವಿಶ್ವಾಸಾರ್ಹತೆ ಒದಗಿಸಿದ ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಮುಂದಾಳುಗಳು ಬಡವರು ಹಣ ಕಳೆದುಕೊಂಡಿರುವ ಪ್ರಕರಣಗಳ ಕುರಿತು ಕನಿಷ್ಟ ನೈತಿಕ ಹೊಣೆಯನ್ನು ಹೊರಬೇಕು, ಇನ್ನು ಮುಂದೆ ಆದರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಿಪಿಐಎಂ ಹೇಳಿಕೆಯಲ್ಲಿ ತಿಳಿಸಿದೆ
