ಖ್ಯಾತ ಆರೋಗ್ಯ ವಿಮಾ ಸೇವಾ ಸಂಸ್ಥೆಯಾದ ಬಜಾಜ್ ಅಲಯನ್ಸ್ ಹಾಗೂ ಕೇರ್ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳಿಂದ ಆರೋಗ್ಯ ವಿಮೆಗಳನ್ನು ಖರೀದಿಸಿರುವವರಿಗೆ ಭಾರತದ ಆರೋಗ್ಯ ವಿಮಾ ಸೇವಾದಾರ ಕಂಪನಿಗಳ ಸಂಸ್ಥೆ (ಎಎಚ್ ಪಿಐ) ನೆಟ್ ವರ್ಕ್ ನಲ್ಲಿರುವ ದೇಶದ 20 ಸಾವಿರ ಆಸ್ಪತ್ರೆಗಳಲ್ಲಿ ವಿಮಾ ಸೇವೆಗಳನ್ನು ಬಂದ್ ಆಗಲಿವೆ.ಈ ಕುರಿತಂತೆ, ಎಎಚ್ ಪಿಐ ಸಂಸ್ಥೆ ತನ್ನೊಂದಿಗೆ ವ್ಯಾವಹಾರಿಕ ನಂಟು ಹೊಂದಿರುವ 20 ಸಾವಿರ ಆಸ್ಪತ್ರೆಗಳಿಗೆ ಎಎಚ್ ಪಿಐ ಆದೇಶ ಹೊರಡಿಸಿದೆ. ಸೆ. ಒಂದರಿಂದ ಈ ಆದೇಶ ಜಾರಿಗೆ ಬರಲಿದೆ.
ಬಜಾಜ್ ಅಲಯನ್ಸ್ ವಿಮಾ ಪಾಲಿಸಿ ಹೊಂದಿರುವವರು ಹಾಗೂ ಕೇರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಹೊಂದಿರುವವರಿಗೆ ಈ ಆಸ್ಪತ್ರೆಗಳಲ್ಲಿ ಕ್ಯಾಶ್ ಲೆಸ್ ಸೇವೆಗಳು ಸಿಕ್ಕೋದಿಲ್ಲ. ಈ ಪಾಲಿಸಿ ಹೊಂದಿರುವವರಿಗೆ ಸೆ. ಒಂದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕೈಯ್ಯಿಂದ ಹಣ ಪಾವತಿಸಬೇಕಿರುತ್ತದೆ.

ಎಎಚ್ ಪಿಐ ವ್ಯಾಪ್ತಿಯಲ್ಲಿ ದೇಶದ ಸುಮಾರು 20 ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಯಾವುದೇ ಆರೋಗ್ಯ ವಿಮಾ ಸೇವೆದಾರ ಕಂಪನಿಯು ಶುರುವಾದರೂ ಆ ಕಂಪನಿಯು ಎಎಚ್ ಪಿಐಯಲ್ಲಿ ಸದಸ್ಯತ್ವ ಪಡೆಯುವುದು ಕಡ್ಡಾಯವಾಗಿರುತ್ತದೆ. ದೇಶದ ಪ್ರತಿಷ್ಠಿತ ಆಸ್ಪತ್ರೆಗಳಾದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆ ಹಾಗೂ ಇನ್ನೂ ಅನೇಕ ಆಸ್ಪತ್ರೆಗಳು, ಹಲವಾರು ನಗರಗಳಲ್ಲಿರುವ ಸ್ಥಳೀಯ ಆಸ್ಪತ್ರೆಗಳು ಎಎಚ್ ಪಿಐ ವ್ಯಾಪ್ತಿಯಲ್ಲಿ ಬರಲಿವೆ.
ಎಎಚ್ ಪಿಐ ನೀಡಿರುವ ಆದೇಶ ಕೇವಲ ಉತ್ತರ ಭಾರತದಲ್ಲಿ ಮಾತ್ರ ಜಾರಿಗೆ ಬರಲಿದೆ. ಸೂಚನೆಯಲ್ಲಿ ದಕ್ಷಿಣ ಭಾರತ ಎಂದೇನೂ ಉಲ್ಲೇಖವಾಗಿಲ್ಲ. ಆ ಬಗ್ಗೆ ಎಎಚ್ ಪಿಐ ವತಿಯಿಂದ ಸ್ಪಷ್ಟನೆಯೇನೂ ಬಂದಿಲ್ಲ. ಆದರೆ, ಈಗ ಹೊರಬಿದ್ದಿರುವ ಆದೇಶದ ಪ್ರಕಾರ, ಈ ಆದೇಶ ಉತ್ತರ ಭಾರತದಲ್ಲಿ ಮಾತ್ರ ಸೆಪ್ಟಂಬರ್ ಒಂದರಿಂದ ಜಾರಿಯಾಗಲಿದೆ.
