ಅಪ್ರಾಪ್ತ ಯುವತಿಯನ್ನು ಅಪಹರಿಸಿ ಲೈಂಗಿಕ ತೃಷೆಗೆ ಬಳಸಿಕೊಳ್ಳುವ ಅನೇಕ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬಾಕೆ ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು 17 ರ ಹರೆಯದ ಕಾಲೇಜು ವಿದ್ಯಾರ್ಥಿಯೊಂದಿಗೆ ಪರಾರಿಯಾಗಿ ಸಿಕ್ಕಿಬಿದ್ದ ಘಟನೆ ದೇವರ ನಾಡು ಕೇರಳದಲ್ಲಿ ನಡೆದಿದೆ. ಕೇರಳದ ಆಲಪ್ಪುಝಾ ಚೇರ್ತಾಳದ 27 ರ ಹರೆಯದ ಮಹಿಳೆ ಸನೂಷ ತನ್ನ ಎರಡು ಮಕ್ಕಳೊಂದಿಗೆ 17 ರ ಬಾಲಕನೊಂದಿಗೆ ಪರಾರಿಯಾಗಿದ್ದಳು. ಈ ಸಂಬಂಧ ಬಾಲಕನ ಪೋಷಕರು ಆಲಪ್ಪುಝಾ ಠಾಣೆಯಲ್ಲಿ ಮಹಿಳೆಯ ವಿರುದ್ಧ ಅಪಹರಣ ಕೇಸ್ ದಾಖಲಿಸಿದ್ದರು.
ಮಹಿಳೆ, ಬಾಲಕ ಮಿಸ್ಸಿಂಗ್ ಆಗಿ ಹನ್ನೆರಡು ದಿನ ಕಳೆದರೂ ಪತ್ತೆಯಾಗದೇ ಇರುವುದು ಪೊಲೀಸರಿಗೆ ಕಗ್ಗಂಟಾಗಿತ್ತು. ಪ್ರಯಾಣದ ನಡುವೆ ಮೊಬೈಲ್ ಫೋನ್ ಬಳಸದ ಕಾರಣ ಫೊಲೀಸರಿಗೂ ಸುಳಿವು ಸಿಕ್ಕಿರಲಿಲ್ಲ.

ಆದರೆ ಮಹಿಳೆ ತನ್ನ ಮೊಬೈಲಿನಿಂದ ಗೆಳತಿಯೊಬ್ಬಳಿಗೆ ಕಳುಹಿಸಿದ ವಾಟ್ಸಾಪ್ ಸಂದೇಶ ಪೊಲೀಸರ ತನಿಖೆಗೆ ದೊಡ್ಡ ಅಸ್ತ್ರ ಕೊಟ್ಟಿತು. ಈ ಸುಳಿವನ್ನು ಆಧರಿಸಿ ತನಿಖೆಗೆ ಇಳಿದ ಪೊಲೀಸರು ಕರ್ನಾಟಕದ ಕೊಲ್ಲೂರಿನ ವಸತಿಗೃಹದಲ್ಲಿ ಇದ್ದಾರೆ ಅನ್ನುವುದನ್ನು ಪತ್ತೆ ಹಚ್ಚಿದ್ದರು. ವಸತಿಗೃಹದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ, ಬಾಲಕನ ಜೊತೆ ಇರುವುದು ದೃಡವಾಗುತ್ತಿದ್ದಂತೆ ದಾಳಿ ನಡೆಸಿದ ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ. ಬಾಲಕ ವಿದ್ಯಾರ್ಥಿ ಅಪ್ರಾಪ್ತ ವಯಸ್ಕನಾಗಿರುವುದರಿಂದ ಮಹಿಳೆಯ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ. ಇತ್ತ ಬಾಲಕನನ್ನು ಅವರ ಹೆತ್ತವರ ಜೊತೆ, ಇಬ್ಬರು ಮಕ್ಕಳನ್ನು ಮಹಿಳೆಯ ಗಂಡನ ಜೊತೆ ಕಳುಹಿಸಿಕೊಡಲಾಗಿದೆ.
ಆಲಪ್ಪುಝಾ ಜಿಲ್ಲೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಪ್ರಕರಣ ಕೊನೆಗೂ ಪತ್ತೆ ಹಚ್ಚುವ ಮೂಲಕ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.
