ದರ್ಗಾ ಕಾನೂನು ಬದ್ಧವೋ ಇಲ್ಲವೋ ಬೇರೆ ಮಾತು; ಆದರೆ ಒಂದು ನಿರ್ದಿಷ್ಟ ಧರ್ಮವನ್ನು ಗುರಿ ಮಾಡುವ ಹಿಂದಿನ ಉದ್ದೇಶವೇನು.? ಹೈಕೋರ್ಟ್ ಕಳವಳ
ದೆಹಲಿಯ ಯಮುನಾ ನದಿ ತೀರದಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಕೋರಿ ‘ಸೇವ್ ಇಂಡಿಯಾ’ ಎನ್ಜಿಒ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿಯಲ್ಲಿ ಒಂದು ಮಜರ್ ಮತ್ತು ರೋಹ್ಟಕ್ ರಸ್ತೆ, ಸೀಲಾಂಪುರ ಮತ್ತು ಬುರಾರಿಯ ಮೂರು ದರ್ಗಾಗಳು ಸೇರಿವೆ.
ಈ ಎನ್ಜಿಒ ಹಿಂದೂ ಬಲಪಂಥೀಯ ಗುಂಪುಗಳೊಂದಿಗೆ ಸಂಬಂಧ ಹೊಂದಿದೆ. ಸಂಘಟನೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರು, ಆಯ್ದ ಸ್ಥಳಗಳನ್ನು ಮಾತ್ರ ಗುರಿಯಾಸಿಕೊಳ್ಳುತ್ತಿರುವುದು ಯಾಕೆ ಎಂದು ಕಳವಳ ವ್ಯಕ್ತಪಡಿಸಿದರು. “ನಿಮಗೆ ಇತರ ಅತಿಕ್ರಮಣಗಳು ಕಾಣುತ್ತಿಲ್ಲವೇ? ನೀವು ಮಜಾರ್ಗಳನ್ನು ಮಾತ್ರ ಏಕೆ ಗುರುತಿಸುತ್ತಿದ್ದೀರಿ?” ಎಂದು ಪ್ರಶ್ನಿಸಿದರು.
ಮುಖ್ಯ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರನ್ನೊಳಗೊಂಡ ಪೀಠವು ಮೌಖಿಕವಾಗಿ, “ನಾವು ನಿಮ್ಮ ಪ್ರಾಮಾಣಿಕತೆ ನೋಡುತ್ತಿದ್ದೇವೆ.. ಮಜಾರ್ಗಳನ್ನು ತೆರವುಗೊಳಿಸುವಂತೆ ನೀವು ಕೋರುತ್ತಿರುವ ಈ ಪೀಠವು ವಿಚಾರಣೆಗೆ ಒಳಪಡಿಸುವ ಐದನೇ ಅಥವಾ ಆರನೇ ಅರ್ಜಿಯಾಗಿರಬೇಕು” ಎಂದು ಹೇಳಿದರು.
“ಸ್ಪಷ್ಟವಾಗಿ ಹೇಳಬೇಕೆಂದರೆ, ದಯವಿಟ್ಟು ಆ ಆಯಾಮವನ್ನು ತೆಗೆದುಕೊಳ್ಳಬೇಡಿ… ಈ ಕಟ್ಟಡ ಕಾನೂನುಬದ್ಧವಾಗಿದೆ ಎಂದು ನಾವು ದೂರದಿಂದಲೂ ಸೂಚಿಸುತ್ತಿಲ್ಲ… ಆದರೆ ನಿರ್ದಿಷ್ಟವಾಗಿ ಮಜಾರ್ಗಳು, ದರ್ಗಾಗಳು ಮಾತ್ರ ನಿಮ್ಮ ಗುರಿ ಏಕೆ? ನೀವು ನಿಜವಾಗಿಯೂ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಬಯಸಿದರೆ, ಅಂತಹ ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಮಾತ್ರವಲ್ಲದೆ ಇನ್ನೂ ಹಲವು ಮಾರ್ಗಗಳಿವೆ. ದಯವಿಟ್ಟು ನಿಮ್ಮ ಪ್ರತಿಷ್ಠಾನಕ್ಕೆ, ಈಗ ಮಾಡುತ್ತಿರುವುದಕ್ಕಿಂತ ಹೆಚ್ಚಿನದನ್ನು ಏನಾದರೂ ಮಾಡಲು ಕೇಳಿ… ನಿಮ್ಮ ಪ್ರತಿಷ್ಠಾನಕ್ಕೆ ಕೆಲವು ಉತ್ತಮ ಸಾರ್ವಜನಿಕ ಕೆಲಸಗಳನ್ನು ಮಾಡಲು ಸಲಹೆ ನೀಡಿ” ಎಂದು ಸೂಚಿಸಿದೆ.
ಸೇವ್ ಇಂಡಿಯಾ ಫೌಂಡೇಶನ್ ಸಂಸ್ಥಾಪಕ ಪ್ರೀತ್ ಸಿಂಗ್ ಅವರು ಅರ್ಜಿಯನ್ನು ಸಲ್ಲಿಸಿದ್ದರು. ಈ ಪ್ರೀತಂ ಸಿಂಗ್ ಅವರು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಹರಡಿದ ಅನೇಕ ಪ್ರಕರಣಗಳ ಆರೋಪವನ್ನು ಹೊಂದಿದ್ದಾರೆ. ಸಿಂಗ್ ಪ್ರಸ್ತುತ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಗಿದ್ದಾರೆ. 2022 ರಲ್ಲಿ, ಬುರಾರಿಯಲ್ಲಿರುವ ‘ಹಿಂದೂ ಮಹಾಪಂಚಾಯತ್’ನಲ್ಲಿ ಮಾಡಿದ ದ್ವೇಷ ಭಾಷಣಕ್ಕಾಗಿ ಸೇವ್ ಇಂಡಿಯಾ ಫೌಂಡೇಶನ್ ಮತ್ತು ಸಿಂಗ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಈ ಹಿಂದೆ ಫೆಬ್ರವರಿ 2024 ರಲ್ಲಿ, ರಾಜಸ್ಥಾನದ ಅಜ್ಮೀರ್ನಲ್ಲಿರುವ ಬಲಪಂಥೀಯ ಹಿಂದೂ ಸಂಘಟನೆ ಮಹಾರಾಣ ಪ್ರತಾಪ್ ಸೇನಾ ಅಜ್ಮೀರ್ ದರ್ಗಾ ಹಿಂದೂ ದೇವಾಲಯವಾಗಿತ್ತು ಎಂದು ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಿರುದನ್ನು ಸ್ಮರಿಸಬೇಕಿದೆ.
