ಸುರತ್ಕಲ್ ಮುಕ್ಕ ರೋಹನ್ ಎಸ್ಟೇಟ್ ಲೇಔಟ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮುಖೇಶ್ ಮಂಡಲ್ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೂನ್ 24 ರಂದು ರಾತ್ರಿ 9 ಗಂಟೆ ಸಮಯದಲ್ಲಿ ಸುರತ್ಕಲ್ ಮುಕ್ಕ ರೋಹನ್ ಎಸ್ಟೇಟ್ ಎಂಬ ಹೆಸರಿನ ಲೇಔಟ್ ನಿಂದ 27 ರ ಹರೆಯದ ಪಶ್ಚಿಮ ಬಂಗಾಳ ನಿವಾಸಿ ಮುಖೇಶ್ ಮಂಡಲ್ ನಾಪತ್ತೆಯಾಗಿರುವ ಬಗ್ಗೆ ಆತನ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳದ ನಿವಾಸಿ ದೀಪಾಂಕರ್ ಎಂಬವರು ನೀಡಿದ ದೂರಿನಂತೆ ದಿನಾಂಕ: 02.07.2025 ರಂದು ಸುರತ್ಕಲ್ ಠಾಣೆಯಲ್ಲಿ ಅ.ಕ್ರ 83/2025 ಕಲಂ ರಂತೆ ಪ್ರಕರಣ ದಾಖಲಾಗಿತ್ತು.

ಅಗಸ್ಟ್ 21ರಂದು ಬೆಳಿಗ್ಗೆ 10:00 ಗಂಟೆಗೆ ಸುರತ್ಕಲ್ ಮುಕ್ಕ ರೋಹನ್ ಎಸ್ಟೇಟ್ ಲೇಔಟ್ ನೊಳಗೆ ಕಾಣೆಯಾದ ಮುಖೇಶ್ ಮಂಡಲ್ ನ ಮೃತ ದೇಹವು STP ಟ್ಯಾಂಕ್ ನೊಳಗೆ ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತ ಮುಖೇಶ್ ಮಂಡಲ್ ನನ್ನು ಲಕ್ಷ್ಮಣ್ ಮಂಡಲ್ ಯಾನೆ ಲಖನ್ ನು ಕೊಲೆ ಮಾಡಿ STP ಟ್ಯಾಂಕ್ ಗೆ ಹಾಕಿ, STP ಟ್ಯಾಂಕ್ ನ ಮುಚ್ಚಳವನ್ನು ಪ್ಲೈವುಡ್ ನ ಶೀಟ್ ನ್ನು ಹಾಕಿ ಮುಚ್ಚಿ ಕೊಲೆಯನ್ನು ಮರೆ ಮಾಚಿರುವ ಬಗ್ಗೆ ಚೇತನ್ ಎಂಬವರು ನೀಡಿದ ದೂರಿನಂತೆ ದಿನಾಂಕ: 21.08.2025 ರಂದು ಸುರತ್ಕಲ್ ಠಾಣೆಯಲ್ಲಿ ಅ.ಕ್ರ: 109/2025 ಕಲಂ 103 (1), 238 ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದರು.
ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಇಳಿದ ಪೊಲೀಸರು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ತೆರಳಿ ಲಕ್ಷ್ಮಣ್ ಮಂಡಲ್ ಯಾನೆ ಲಖನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮುಖೇಶ್ ಮಂಡಲ್ ನನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ದಿನಾಂಕ: 24.06.2025 ರಂದು ರಾತ್ರಿ 9:00 ಗಂಟೆಗೆ ಮುಕ್ಕ ದ ರೋಹನ್ ಎಸ್ಟೇಟ್ ನ ಲೇಔಟ್ ನಲ್ಲಿ ನಿರ್ಮಾಣ ಹಂತದ ಕಟ್ಟಡದೊಳಗೆ ಲಕ್ಷ್ಮಣ್ ಮಂಡಲ್ ಯಾನೆ ಲಖನ್ ಹಾಗೂ ಮುಖೇಶ್ ಮಂಡಲ್ ರವರು ಜೊತೆಯಾಗಿ ಮದ್ಯಪಾನ ಸೇವಿಸಿದ್ದು, ಈ ಸಂದರ್ಭ ಮುಖೇಶ್ ಮಂಡಲ್ ನು ಲಕ್ಷ್ಮಣ್ ಮಂಡಲ್ ಪತ್ನಿಯ ಜೊತೆ ಚಕ್ಕಂದ ಹಾಗೂ ಅಶ್ಲೀಲ ವಿಡಿಯೋ ತೋರಿಸಿದಾಗ ಕುಪಿತಗೊಂಡ ಆರೋಪಿ ಲಕ್ಷ್ಮಣ್ ಮಂಡಲ್ ಯಾನೆ ಲಖನ್ ಪಕ್ಕದ ರೂಮಿನಲ್ಲಿದ್ದ ಕಬ್ಬಿಣದ ಸರಳನ್ನು ತೆಗೆದುಕೊಂಡು ತಲೆಗೆ ಹೊಡೆದು ಕೊಲೆ ಮಾಡಿ ಕೊಲೆಯನ್ನು ಮರೆ ಮಾಚಲು ಮೃತ ಶರೀರವನ್ನು ಅಲ್ಲೆ ಇದ್ದ STP ಟ್ಯಾಂಕ್ ನೊಳಗೆ ಹಾಕಿರುವುದಾಗಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ದಿನಾಂಕ: 04.09.2025 ರಂದು ಠಾಣೆಯಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿ ಲಕ್ಷ್ಮಣ್ ಮಂಡಲ್ ಯಾನೆ ಲಖನ್ ನನ್ನು 5 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಆರೋಪಿ ಲಕ್ಷ್ಮಣ್ ಮಂಡಲ್ ಯಾನೆ ಲಖನ್ ನ ಮೇಲೆ ಪಶ್ಚಿಮ ಬಂಗಾಳ ರಾಜ್ಯದ ರತುವಾ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ. ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್. ಪಿ ರವರ ನೇತೃತ್ವದಲ್ಲಿ ಪತ್ತೆ ಕಾರ್ಯ ನಡೆಸಿದ್ದರು.
