ಉಡುಪಿ: ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ.!

ಕರಾವಳಿ

ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಳ್ಳಲಿ

ಕರಾವಳಿ ಪ್ರದೇಶ ಪ್ರವಾಸೋದ್ಯಮದ ತಾಣ. ಅದರಲ್ಲೂ ಉಡುಪಿ ಜಿಲ್ಲೆ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿನ ಬೀಚುಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕುಂದಾಪುರ, ಬೈಂದೂರು ತಾಲೂಕುಗಳು ಪ್ರವಾಸಿಗರಿಗೆ ಇನ್ನಷ್ಟು ನೆಚ್ಚಿನ ತಾಣವಾಗಿದೆ. ದೂರದೂರಿನಿಂದ ಬರುವ ಪ್ರವಾಸಿಗರು ಇಲ್ಲಿನ ಬೀಚ್ ಸೌಂದರ್ಯಕ್ಕೆ ಮನಸೋತು ಈಜಾಡಲು ತೆರಳಿ ಜೀವ ಬಲಿಯಾಗುವ ಅನೇಕ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಸಾಲು ಸಾಲು ಪ್ರವಾಸಿಗರು ಉಡುಪಿ ಜಿಲ್ಲೆಯಲ್ಲಿ ಸಮುದ್ರಪಾಲಾಗುತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ಮಾತ್ರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ.

ಮೊದಲೇ ಹೇಳಿದಂತೆ ಉಡುಪಿ ಜಿಲ್ಲೆ ಪ್ರವಾಸಿಗರ ನೆಚ್ಚಿನ ತಾಣ. ದೂರದೂರಿನಿಂದ ಇಲ್ಲಿನ ಸಮುದ್ರ, ಬೀಚ್ ಸೌಂದರ್ಯ ಸವಿಯಲು ಸಾಲು ಸಾಲು ಪ್ರವಾಸಿಗರು ಬರುತ್ತಿದ್ದಾರೆ. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಹಾಗೆ ಪ್ರವಾಸಿ ತಾಣ ಸವಿಯಲು ಬಂದವರು ರೆಸಾರ್ಟ್ ಗಳಲ್ಲಿ ಉಳಿದುಕೊಳ್ಳುತ್ತಾರೆ. ಇಲ್ಲಿನ ಸಮುದ್ರ, ಬೀಚ್ ಆಳದ ಬಗ್ಗೆ ಪ್ರವಾಸಿಗರಿಗೆ ಅರಿವು ಇರುವುದಿಲ್ಲ. ಎಂಜಾಯ್ ಮೆಂಟ್ ಹೆಸರಿನಲ್ಲಿ ಈಜಾಡಲು ತೆರಳಿದವರು ಆಳದ ಬಗ್ಗೆ ಮಾಹಿತಿ ಇಲ್ಲದೇ ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋದವರ ಸಂಖ್ಯೆಯೇ ಅಧಿಕ.

ಇತ್ತೀಚೆಗೆ ಕುಂದಾಪುರ ಗೋಪಾಡಿ ಸಮುದ್ರಕ್ಕೆ ಈಜಲು ಹೋದ ನಾಲ್ವರು ಯುವಕರು ನೀರುಪಾಲಾಗಿದ್ದರು. ಬೆಂಗಳೂರಿನಿಂದ ಹತ್ತುಮಂದಿಯಷ್ಟಿದ್ದ ಯುವಕರ ಗುಂಪು ಕುಂಬಾಶಿಯ ರೆಸಾರ್ಟ್ ವೊಂದರಲ್ಲಿ ತಂಗಿದ್ದರು. ಈಜಾಡಲು ಗೋಪಾಡಿ ಚೆರ್ಕಿ ಕಡು ಎಂಬಲ್ಲಿ ಸಮುದ್ರಕ್ಕೆ ಇಳಿದಿದ್ದರು. ಸಮುದ್ರದ ಅಬ್ಬರದ ಅಲೆಗೆ ನಾಲ್ವರು ಕೊಚ್ಚಿ ಹೋಗಿದ್ದರು.

ಉಡುಪಿ ಜಿಲ್ಲೆಯಲ್ಲಿ ಮರವಂತೆ, ಕೋಡಿ ಹೀಗೆ ಹತ್ತಾರು ಬೀಚ್ ಗಳಿವೆ. ಬೆಂಗಳೂರು ಮತ್ತಿತರ ಕಡೆಗಳಿಂದ ಸಮುದ್ರ ನೋಡಲು ಯುವಕರ ದಂಡೆ ಬರುತ್ತದೆ. 18-19 ವರ್ಷ ಪ್ರಾಯದ ಯುವಕರೇ ಹೆಚ್ಚು. ಅವರಿಗೆ ಇಲ್ಲಿನ ಸಮುದ್ರ ಆಳದ ಬಗ್ಗೆ ಅರಿವು ಇರುವುದಿಲ್ಲ. ಪ್ರವಾಸೋದ್ಯಮ ಇಲಾಖೆ ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ಗೈಡ್ ಇಡುವ ಕೆಲಸ ಮಾಡಬೇಕು. ಆದರೆ ಪ್ರವಾಸೋದ್ಯಮ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿದೆ. ಇಲ್ಲಿನ ಪ್ರವಾಸಿಗರಿಗಾಗಿ ಬರುತ್ತಿರುವ ಬಹುತೇಕ ವಿದ್ಯಾರ್ಥಿಗಳು ಲಾಡ್ಜ್, ಗೆಸ್ಟ್ ಹೌಸ್ ಗಳಲ್ಲಿ ತಂಗುತ್ತಿದ್ದು, ಸಮುದ್ರದ ಡೀಪ್ ಬಗ್ಗೆ ಅರಿವು ಇಲ್ಲದೆ, ಈಜಾಡಲು ತೆರಳುತ್ತಾರೆ. ಏನಾದರೂ ಅನಾಹುತ ಸಂಭವಿಸಿದರೆ, ಅಲ್ಲಿ ಸೆಕ್ಯುರಿಟಿ ಗಾರ್ಡ್ ಇರುವುದಿಲ್ಲ, ಜೀವ ರಕ್ಷಕ ಜಾಕೆಟ್ ಕೂಡ ಇರುವುದಿಲ್ಲ. ಸ್ಥಳೀಯವಾಗಿ ರಕ್ಷಣಾ ತಂಡಗಳು ಕೂಡ ಇಲ್ಲ. ಅನಾಹುತ ಸಂಭವಿಸಿದಾಗ ದೂರದಿಂದ ರಕ್ಷಣಾ ತಂಡ ಬರುವ ಹೊತ್ತಿಗೆ ಜೀವ ಹಾನಿ ಸಂಭವಿಸಿರುತ್ತದೆ. ಇದಕ್ಕೆಲ್ಲ ನೇರ ಹೊಣೆ ಪ್ರವಾಸೋದ್ಯಮ ಇಲಾಖೆ.

ಸರಕಾರದಿಂದ ಅನುದಾನ ಬಂದರೂ ಮೂಲಭೂತ ಸೌಕರ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆ ಮೀನಮೇಷ ಎಣಿಸುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಇಂತಹ ದಿವ್ಯ ನಿರ್ಲಕ್ಷ್ಯ ಮೃತ್ಯುಕೂಪವಾಗಿ ಬದಲಾಗಲು ಕಾರಣವಾಗಿದೆ. ಸ್ಥಳೀಯ ಪಂಚಾಯತ್ ಆಡಳಿತ ಹಾಗೂ ಪೊಲೀಸ್ ಇಲಾಖೆ ಕೂಡ ಮೌನಕ್ಕೆ ಶರಣಾಗಿದೆ. ಇನ್ನು ಪ್ರವಾಸೋದ್ಯಮ ಇಲಾಖೆ ಸಮುದ್ರದಿಂದಾಗುವ ಅಪಾಯದ ಬಗ್ಗೆ ಅಣಕು ಪ್ರದರ್ಶನ ನಡೆಸಿದರೂ ಅದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿದೆ. ಇದರಿಂದ ಬೇರೆ ಯಾವುದೇ ಪ್ರಯೋಜನವಿಲ್ಲ.

ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಳ್ಳಲಿ

ಉಡುಪಿ ಜಿಲ್ಲೆಯಲ್ಲಿ ಸರಣಿಯಾಗಿ ದುರಂತಗಳು ನಡೆಯುತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಸರಕಾರದಿಂದ ಇಲಾಖೆಗೆ ಅನುದಾನ ಬಂದರೂ ಜನರ ರಕ್ಷಣೆಗೆ ಬೇಕಾದ ಸೌಕರ್ಯಕ್ಕೆ ಕೆಲಸ ಮಾಡುತ್ತಿಲ್ಲ. ದುರಂತ ನಡೆದ ನಂತರ ಪ್ರವಾಸಿಗರದ್ದೇ ತಪ್ಪು ಅನ್ನುವ ರೀತಿಯ ತೀರ್ಮಾನಕ್ಕೆ ಬರಲಾಗುತ್ತಿದೆ. ಇದು ವ್ಯವಸ್ಥೆಯ ಹೊಣೆಗೇಡಿತನದಿಂದ ಉಂಟಾಗುವ ಸಾವಲ್ಲವೇ? ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ನಿರ್ಲಕ್ಷ್ಯದ ಸಾವು ಕೊನೆಯಾಗಲಿ.