ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ತನ್ನ ಕೆಲಸವನ್ನು ಮುಗಿಸಬೇಕಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶುಕ್ರವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದ್ದಾರೆ. ಗಾಜಾದಲ್ಲಿ ವಿನಾಶಕಾರಿ ಯುದ್ಧವನ್ನು ಕೊನೆಗೊಳಿಸಲು ಒಪ್ಪದ ಹಿನ್ನೆಲೆಯಲ್ಲಿ ವಿವಿಧ ರಾಷ್ಟ್ರಗಳ ಪ್ರತಿಭಟನೆ ನಡುವೆಯೂ ವಿಶ್ವಸಂಸ್ಥೆಯಲ್ಲಿ ಉದ್ಧಟತನದಿಂದ ಭಾಷಣ ಮಾಡಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಅವರು ಭಾಷಣ ಮಾಡಲು ತಯಾರಾಗುತ್ತಿದ್ದಂತೆಯೇ ಡಜನ್ ಗಟ್ಟಲೇ ರಾಷ್ಟ್ರಗಳ ಪ್ರತಿನಿಧಿಗಳು ವಿಶ್ವಸಂಸ್ಥೆ ಸಾಮಾನ್ಯ ಸಭೆಯಿಂದ ಹೊರನಡೆದಿದ್ದಾರೆ. ನಂತರ ನೆತನ್ಯಾಹು ಭಾಷಣ ಮಾಡಿದ್ದಾರೆ. ಇಸ್ರೇಲಿ ನಾಯಕ ಮಾತನಾಡುತ್ತಿದ್ದಂತೆ ಸಭಾಂಗಣದಲ್ಲಿ ಕೂಗಾಟ, ಧಿಕ್ಕಾರದ ಘೋಷಣೆ ಮೊಳಗಿತು. ಇನ್ನೂ ಕೆಲವರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಹಮಾಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ನೆತನ್ಯಾಹು ಅವರನ್ನು ಬೆಂಬಲಿಸಿದ ಯುಎಸ್ ನಿಯೋಗವು ಅಲ್ಲಿತ್ತು. ಕೆಲವು ವಿಶ್ವದ ಪ್ರಮುಖ ರಾಷ್ಟ್ರಗಳ ಪ್ರತಿನಿಧಿಗಳು ಹಾಜರಿದ್ದರು. ಅಮೆರಿಕ, ಇಂಗ್ಲೆಂಡ್ ತಮ್ಮ ಹಿರಿಯ ಅಧಿಕಾರಿಗಳು ಅಥವಾ ತಮ್ಮ ವಿಶ್ವಸಂಸ್ಥೆ ರಾಯಭಾರಿಯನ್ನು ಅವರ ವಿಭಾಗಕ್ಕೆ ಕಳುಹಿಸಲಿಲ್ಲ. ಬದಲಾಗಿ, ಕಿರಿಯ, ಕೆಳಮಟ್ಟದ ರಾಜತಾಂತ್ರಿಕರಿಂದ ತುಂಬಿತ್ತು.
