ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರ ಮೇಲೆ ಹಲ್ಲೆ ಯತ್ನ ಖಂಡನೆ.

ರಾಷ್ಟ್ರೀಯ

ಸುಪ್ರೀಂ ಕೋರ್ಟ್ ಕಲಾಪ ನಡೆಯುತ್ತಿದ್ದ ವೇಳೆ ಇಂದು (6.10.2025) ಮತಾಂಧ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರ ಮೇಲೆ ಶೂ ಎಸೆದು ಹಲ್ಲೆ ನಡೆಸಲು ಯತ್ನಿಸಿದ ಘಟನೆಯನ್ನು ಅಖಿಲ ಭಾರತ ವಕೀಲರ ಒಕ್ಕೂಟ, ದ.ಕ.ಜಿಲ್ಲಾ ಘಟಕವು ತೀವ್ರವಾಗಿ‌ ಖಂಡಿಸುತ್ತದೆ.

ಆರ್.ಎಸ್.ಎಸ್. ಸಂಘಟನೆಯ ನೂರು ವರ್ಷದ ಸಂಭ್ರಮಾಚರಣೆಯ ಕರಿ ನೆರಳು ಈ ಮನುವಾದಿ, ದಲಿತ ವಿರೋಧಿ ಕೃತ್ಯದ ಹಿಂದೆ ಅಡಗಿದೆ. ನ್ಯಾಯಮೂರ್ತಿ ಗವಾಯಿಯವರ ತಾಯಿ ಕಮಲಾದೇವಿಯವರು ಆರ್.ಎಸ್.ಎಸ್. 100 ರ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ ಬೆನ್ನಲ್ಲೇ ‘ಸನಾತನ ಧರ್ಮದ ಅವಮಾನ’ ದ ನೆಪದಲ್ಲಿ‌ ನಡೆಸಿದ‌ ಈ ಧಾಳಿ ನ್ಯಾಯಾಂಗದ ಮೇಲಿನ ಆಕ್ರಮಣ ಹಾಗೂ ಒರ್ವ ದಲಿತ ಮುಖ್ಯ ನ್ಯಾಯಮೂರ್ತಿಯವರ ಹೆಸರಿಗೆ ಕಳಂಕ ತರುವ ಹುನ್ನಾರದಿಂದ ಕೂಡಿದ್ದಾಗಿದೆ, ಮಾತ್ರವಲ್ಲ ಉನ್ನತ, ಅತ್ಯುನ್ನತ ಸಂವಿಧಾನಿಕ ಹುದ್ದೆಗಳಲ್ಲಿ ದಲಿತ ಬಂಧುಗಳನ್ನು ಎಷ್ಟಕ್ಕೂ ಸಹಿಸದ ಮನುವಾದಿ ಮನೋಸ್ಥಿತಿಯೂ ಇದರ ಹಿಂದೆ ಅಡಗಿದೆ.

ಮುಖ್ಯ ನ್ಯಾಯಮೂರ್ತಿಗಳ ಮೇಲಿನ‌ ಈ ಧಾಳಿ ಸಂವಿಧಾನದ ಮೇಲಿನ ಹೇಯ ಅಪಚಾರವಾಗಿದ್ದು ಇಂತಹ ಕೃತ್ಯಗಳನ್ನು ಪ್ರಜಾಪ್ರಭುತ್ವವಾದಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ತಪ್ಪಿತಸ್ಥ ವಕೀಲ ಮತ್ತು ಆತನನ್ನು ಬೆಂಬಲಿಸಿದ ಸಂವಿಧಾನ ವಿರೋಧಿ ಶಕ್ತಿಗಳ ಮೇಲೆ ಕೂಡಲೇ ಅತ್ಯುಗ್ರ ಕಾನೂನಿನ ಕ್ರಮಗಳನ್ನು ಜರಗಿಸಬೇಕೆಂದು ಅಖಿಲ‌ ಭಾರತ ವಕೀಲರ ಸಂಘವು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತದೆ.