ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಸಿಎಂ ಹೇಳಿಕೆ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳು ಮತ್ತೆ ಸಕ್ರಿಯರಾಗಿದ್ದು, ತೆರೆಮರೆಯಲ್ಲಿ ಲಾಬಿ ಚಟುವಟಿಕೆಗಳು ಗರಿಗೆದರಿವೆ. ಒಂದು ಕಡೆ ಹಾಲಿ ಸಚಿವರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳುವ ತವಕವಾದರೆ, ಮತ್ತೊಂದೆಡೆ ಸಚಿವ ಸ್ಥಾನ ವಂಚಿತ ಶಾಸಕರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಸಂಪುಟ ಪುನಾರಚನೆಯ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ್ದರು. ಇದುವರೆಗೂ ಸೈಲೆಂಟ್ ಆಗಿದ್ದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಈ ಹೇಳಿಕೆ ಹೊಸ ಚೈತನ್ಯ ನೀಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ವರ್ಷಾಂತ್ಯದೊಳಗೆ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಸಂಪುಟ ಪುನಾರಚನೆಯ ಅಂತಿಮ ನಿರ್ಧಾರ ಹೈಕಮಾಂಡ್ ಅಂಗಳದಲ್ಲಿರುವುದರಿಂದ, ಆಕಾಂಕ್ಷಿಗಳ ದಂಡು ಈಗ ಇದೀಗ ದೆಹಲಿಯತ್ತ ಮುಖ ಮಾಡಿದೆ. ಅದರಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸವು ಶಾಸಕರ ರಾಜಕೀಯ ತಾಣವಾಗಿ ಮಾರ್ಪಟ್ಟಿದೆ. ಖರ್ಗೆಯವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಹಲವು ಶಾಸಕರು ಅವರನ್ನು ಭೇಟಿಯಾಗಿ, ತಮ್ಮ ನಿಷ್ಠೆ ಪ್ರದರ್ಶಿಸಿ ಸಚಿವ ಸ್ಥಾನಕ್ಕಾಗಿ ಮನವಿ ಸಲ್ಲಿಸುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾ, ತಮ್ಮ ಪ್ರಭಾವ ಬೀರುವ ಕಸರತ್ತಿನಲ್ಲಿ ಆಕಾಂಕ್ಷಿಗಳು ತೊಡಗಿದ್ದಾರೆ. ಡಿಸೆಂಬರ್ನಲ್ಲಿ ಸಂಪುಟ ಪುನಾರಚನೆ ನಡೆದರೆ, ಹೈಕಮಾಂಡ್ ಯಾವ ಮಾನದಂಡಗಳನ್ನು ಅನುಸರಿಸಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಸಚಿವ ಸಂಪುಟ ಸೇರಲು ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಹಿರಿಯ ನಾಯಕರಾದ ಸಲೀಂ ಅಹ್ಮದ್, ನರೇಂದ್ರ ಸ್ವಾಮಿ ತಾವು ಪ್ರಬಲ ಆಕಾಂಕ್ಷಿಗಳು ಎಂದು ಈಗಾಗಲೇ ಬಹಿರಂಗಪಡಿಸಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಎರಡು ಸಚಿವ ಸ್ಥಾನ ನೀಡಲೇಬೇಕು ಎಂದು ಆ ಸಮುದಾಯದ ಶಾಸಕರು ಒಗ್ಗಟ್ಟಿನಿಂದ ಒತ್ತಡ ಹೇರುತ್ತಿದ್ದಾರೆ. ಇತ್ತೀಚೆಗೆ ಆರೋಪಗಳಿಂದ ಸಚಿವ ಸ್ಥಾನ ಕಳೆದುಕೊಂಡಿದ್ದ ಬಿ. ನಾಗೇಂದ್ರ ಕೂಡ ಮತ್ತೆ ಸಂಪುಟ ಸೇರುವ ವಿಶ್ವಾಸದಲ್ಲಿದ್ದಾರೆ. ಒಟ್ಟಿನಲ್ಲಿ, ಸಿಎಂ ಸಿದ್ದರಾಮಯ್ಯ ಅವರ ಒಂದು ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ ಲಾಬಿ ಇನ್ನಷ್ಟು ತೀವ್ರಗೊಳ್ಳಲಿದೆ.
