ಸೈಬರ್ ಅಪರಾಧ ಠಾಣೆ ಪೊಲೀಸರು ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಅಂತರರಾಜ್ಯ ಆರೋಪಿಯೊಬ್ಬನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಬಂದಿತ ಆರೋಪಿ ನೂರಾರು ಕೋಟಿ ರೂ. ವಂಚಿಸಿದ್ದಾನೆ ಎನ್ನಲಾಗಿದ್ದು, ಈತನ ಬ್ಯಾಂಕ್ ಖಾತೆಯಲ್ಲಿ 18 ಕೋಟಿ ರೂ. ಪತ್ತೆಯಾಗಿದೆ. ಹಾಸನ ಬೇಲೂರಿನ ಶಾಂತಿನಗರದ ನಿವಾಸಿ ಸೈಯದ್ ಅರ್ಫಾತ್ ಪಾಷ ಬಂಧಿತ. ಪ್ರಮುಖ ಆರೋಪಿ ಹೈದರಾಬಾದ್ ಮೂಲದ ಉಬೇದ್ ತಲೆಮರೆಸಿಕೊಂಡಿದ್ದಾನೆ.
ದಾವಣಗೆರೆಯ ಉದ್ಯಮಿಯ ಬ್ಯಾಂಕ್ ಖಾತೆಯಲ್ಲಿದ್ದ ರೂ. 52.60 ಲಕ್ಷ ಹಣವನ್ನು ಆರೋಪಿಗಳು ನೆಟ್ ಬ್ಯಾಂಕಿಂಗ್ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಖಾತೆಯು ಬ್ಲಾಕ್ ಆಗಿದ್ದನ್ನು ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಆನ್‌ಲೈನ್ ಮೂಲಕ ವಂಚನೆ ನಡೆದಿರುವುದು ಉಧ್ಯಮಿಗೆ ಗೊತ್ತಾಗಿದೆ. ಈ ಬಗ್ಗೆ ಉಧ್ಯಮಿ ನೀಡಿದ ದೂರು ಆಧರಿಸಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿಗಳಾದ ಸೈಯದ್ ಅರ್ಫಾತ್ ಹಾಗೂ ಉಬೇದ್ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ 127 ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ಗೊತ್ತಾಗಿದೆ. ಜುಲೈ 27 ರಿಂದ ಆಗಸ್ಟ್ 19ರ ವರೆಗೆ ಆರೋಪಿಗಳು ಬೇರೆಯವರ ಬ್ಯಾಂಕ್ ಖಾತೆಗಳಿಂದ 150 ಕೋಟಿಗೂ ಮಿಕ್ಕ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ. ಈ ಪೈಕಿ 132 ಕೋಟಿ ರೂ. ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಖಾತೆಯಲ್ಲಿ ಉಳಿದಿದ್ದ 18 ಕೋಟಿ ರೂ. ಹಣವನ್ನು ಪೊಲೀಸರು ಬ್ಯಾಂಕ್ ಮೂಲಕ ಫ್ರೀಜ್ ಮಾಡಿಸಿದ್ದಾರೆ.
ಆರೋಪಿಗಳ ವಿರುದ್ದ ದೇಶದ ನಾನಾ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಸೈಬರ್ ಠಾಣೆಗಳಲ್ಲಿ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಇದೇ ಮೊದಲ ಬಾರಿಯಾಗಿ ಆರೋಪಿ ಸಿಕ್ಕಿಬಿದ್ದಿದ್ದು, ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
