ಬಿಜೆಪಿಗರಿಗೆ ಗೋವುಗಳ ಬಗ್ಗೆ ನಿಜವಾದ ಪ್ರೀತಿ, ಗೌರವವಿದ್ದರೆ, ವಿದೇಶಗಳಿಗೆ ಗೋಮಾಂಸ ರಫ್ತು ನಿಷೇಧಿಸಿ: ಸಚಿವ ರಾಮಲಿಂಗ ರೆಡ್ಡಿ

ರಾಜ್ಯ

ಬಿಜೆಪಿ ಸರ್ಕಾರ ಬಂದ ನಂತರ ಭಾರತ ಗೋ ಮಾಂಸ ರಪ್ತು ಮಾಡುವಲ್ಲಿ 2ನೇ ಸ್ಥಾನಕ್ಕೆ ಏರಿದೆ.

ಗೋವುಗಳ ಬಗ್ಗೆ ನಿಜವಾದ ಪ್ರೀತಿ ಮತ್ತು ಗೌರವವಿದ್ದರೆ, ಮೊದಲು ವಿದೇಶಗಳಿಗೆ ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಿ ಎಂದು ಸಚಿವ ರಾಮಲಿಂಗಾರೆಡ್ಡಿ ಯವರು ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರಿಗೆ ನೇರ ಸವಾಲು ಹಾಕಿದ್ದಾರೆ. ಗೋ ಸಂರಕ್ಷಣೆಯ ಹೆಸರಿನಲ್ಲಿ ರಾಜಕೀಯ ಮಾಡುವ ಬದಲು ಕೃತಿಯ ಮೂಲಕ ಬದ್ಧತೆ ಪ್ರದರ್ಶಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗೋಮಾಂಸ ರಫ್ತು ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ ಎಂದು ಅಂಕಿಅಂಶಗಳ ಸಮೇತ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಗೋಮಾಂಸ ರಫ್ತಿನಲ್ಲಿ ಜಾಗತಿಕವಾಗಿ ಭಾರತ 3ನೇ ಸ್ಥಾನದಲ್ಲಿತ್ತು. ಆದರೆ, ಬಿಜೆಪಿ ಸರ್ಕಾರ ಬಂದ ನಂತರ ನಾವು 2ನೇ ಸ್ಥಾನಕ್ಕೆ ಏರಿದ್ದೇವೆ. ಇದು ಯಾವ ರೀತಿಯ ಗೋ ಸಂರಕ್ಷಣೆ.? ನಿಮಗೆ ಗೋವುಗಳ ಮೇಲೆ ನಿಜವಾದ ಪ್ರೀತಿ ಇದ್ದರೆ, ಮೊದಲು ಈ ರಫ್ತನ್ನು ನಿಲ್ಲಿಸಿ. ನಾನು ಕೇಂದ್ರ ಸರ್ಕಾರ, ಎಲ್ಲಾ ಬಿಜೆಪಿ ಮುಖಂಡರು, ವಿಶ್ವ ಹಿಂದೂ ಪರಿಷತ್ ಹಾಗೂ ಆರೆಸ್ಸೆಸ್‌ನವರಿಗೆ ಈ ಒತ್ತಾಯ ಮಾಡುತ್ತೇನೆ. ಇದನ್ನು ನಿಲ್ಲಿಸಿದರೆ ಮಾತ್ರ ನಿಜವಾದ ಅರ್ಥದಲ್ಲಿ ಗೋವುಗಳು ಉಳಿಯುತ್ತವೆ. ಕೇವಲ ಹಿಂದೂ ಧರ್ಮ ಮತ್ತು ಗೋ ಸಂರಕ್ಷಣೆಯ ಹೆಸರಿನಲ್ಲಿ ರಾಜಕೀಯ ಮಾಡುವುದರಿಂದ ಗೋವುಗಳನ್ನು ಉಳಿಸಲು ಸಾಧ್ಯವಿಲ್ಲ, ಎಂದು ಅವರು ತೀಕ್ಷ್ಣವಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಚಿವ ರಾಮಲಿಂಗಾರೆಡ್ಡಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇದು ಗೋಹತ್ಯೆ ಮತ್ತು ಗೋಮಾಂಸ ರಫ್ತಿನ ಕುರಿತ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ರಾಜಕೀಯ ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆಯಿದೆ.