ಹೊರಗೆ ಆರ್ ಎಸ್ ಎಸ್ ವಿರುದ್ಧ ಕಿಡಿ; ಒಳಗಡೆ ಆರ್ ಎಸ್ ಎಸ್ ಅಪ್ಪಿ ಮುದ್ದಾಡುತ್ತಿರುವ ಕಾಂಗ್ರೆಸ್ ಸೇನಾನಿಗಳು.!

ರಾಜ್ಯ

ಕಾಂಗ್ರೆಸ್ ಸರ್ಕಾರದಲ್ಲಿ ಲಾಭದಾಯಕ ಹುದ್ದೆಗಳು ಆರ್ ಎಸ್ ಎಸ್ ಪಾಲು.!

ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳ ನಿರ್ಬಂಧ ಬಗ್ಗೆ ಭಾರೀ ಸದ್ದು ಗದ್ದಲ ಕೇಳಿ ಬರುತ್ತಿರುವ ಹೊತ್ತಿಗೆ ಕಾಂಗ್ರೆಸ್ ಪಕ್ಷವನ್ನು ಲಗಾಡಿ ತೆಗೆಯುವವರಾರು.? ಅನ್ನುವ ಬಗ್ಗೆ ಚರ್ಚೆಗಳು ನಡೆಯತೊಡಗಿದೆ. ಕಾಂಗ್ರೆಸ್ ನಾಯಕರು ಮೃದು ಹಿಂದುತ್ವದ ಕಡೆಗೆ ವಾಲಿರುವ ಪರಿಣಾಮ ಕಾಂಗ್ರೆಸ್ ಗೆ ಸರಣಿ ಸೋಲಾಗುತ್ತಿದೆ. ಬಿಜೆಪಿಯ ಸೈದ್ಧಾಂತಿಕತೆಯ ವಿರುದ್ಧ ಸಮರ ಸಾರಿ ಪಕ್ಷವನ್ನು ಬೆಳೆಸಬೇಕಾದ ಕಾಂಗ್ರೆಸ್ಸಿಗರೇ ಸ್ವತ‌ಹ ಬಿಜೆಪಿಗರಾಗಿ ಪರಿವರ್ತಿತರಾಗುತ್ತಿರುವುದು ಕಾಂಗ್ರೆಸ್ ದೊಡ್ಡ ಹಿನ್ನಡೆ ಅನುಭವಿಸಲು ಕಾರಣವಾಗಿದೆ.

ರಾಜ್ಯದಲ್ಲಿ ಆರ್ಎಸ್ಎಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂಬ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಸಚಿವರೇ ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಾರೆ. ಆದರೆ ಇನ್ನೊಂದು ಕಡೆ ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಆರ್ಎಸ್ಎಸ್ ಕಾರ್ಯಕರ್ತರಿಗೆ ಮಹತ್ವದ ಹುದ್ದೆಗಳನ್ನು ನೀಡಿ ಆದೇಶ ಹೊರಡಿಸುತ್ತದೆ. ಸರ್ಕಾರ ಆರ್​ಎಸ್​ಎಸ್ ಸೇರಿದಂತೆ ಸಂಘ, ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಬಾರದೆಂದು ಬ್ರೇಕ್ ಹಾಕಿದೆ. ಇದರ ನಡುವೆ ಆರ್​​ಎಸ್​ಎಸ್​ ಕಾರ್ಯಕರ್ತರೊಬ್ಬರನ್ನು ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್​​​ಗೆ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಸಧ್ಯ ಇದೀಗ ಈ ವಿಚಾರ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೂಕಾರಣವಾಗಿದೆ.

ಸಹಕಾರಿ ಸಚಿವ ರಾಜಣ್ಣ ರಾಜೀನಾಮೆ ನೀಡಿದ ಬಳಿಕ ಸಹಕಾರ ಇಲಾಖೆ ಸಿಎಂ ಸಿದ್ದರಾಮಯ್ಯ ಬಳಿಯೇ ಇದೆ. ತಿಪಟೂರಿನ ಆರ್ಎಸ್ಎಸ್ ಕಾರ್ಯಕರ್ತ ಡಾ.ಶ್ರೀಧರ್ ಕುಮಾರ್‌ ಎಂಬವರನ್ನು ಇದೀಗ ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಗೆ ಸದಸ್ಯರನ್ನಾಗಿ ಕಾಂಗ್ರೆಸ್ ನೇತ್ರತ್ವದ ಸರ್ಕಾರ ನೇಮಕ ಮಾಡಿದೆ. ಇದನ್ನು ಮುಖ್ಯಮಂತ್ರಿಗಳೇ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟ್ರಸ್ಟ್​​ನ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಶ್ರೀಧರ್ ಅವರ ಟ್ರಸ್ಟ್ ಸದಸ್ಯತ್ವ ವಾಪಸ್ ಪಡೆಯುಂತೆ ಆಗ್ರಹಿಸಿದ್ದಾರೆ. ಇಂತಹದ್ದೇ ಪ್ರಸಂಗ ದ.ಕ ಜಿಲ್ಲೆಯಲ್ಲೂ ನಡೆದಿದೆ. ಜಿಲ್ಲೆಯ ಒಬ್ಬರನ್ನು ಸಿಂಡಿಕೇಟ್ ಸದಸ್ಯರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು ಇದರ ಸಿಂಡಿಕೇಟ್ ಸದಸ್ಯರನ್ನಾಗಿ ಇತ್ತೀಚೆಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಈ ಆದೇಶದ ಹಿಂದೆ ಕಾಂಗ್ರೆಸಿನ ಯುವ ನಾಯಕನೊಬ್ಬರ ಪಾತ್ರ ಎದ್ದು ಕಾಣುತ್ತಿದೆ. ಇದು ಕಾಂಗ್ರೆಸಿನ ಸಂಘಿ ಜಾತ್ಯಾತೀತತೆ.!

ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್ ಪಕ್ಷದಲ್ಲಿರುವ ಮೃದು ಹಿಂದುತ್ವವಾದಿಗಳೇ ಸೋಲಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸೈದ್ಧಾಂತಿಕ ಹಿನ್ನೆಲೆ, ಬದ್ಧತೆಯೇ ಇಲ್ಲ. ಸೈದ್ಧಾಂತಿಕವಾಗಿ ದಿವಾಳಿಯ ಅಂಚಿಗೆ ತಲುಪಿದ್ದಾರೆ. ಕೋಮುವಾದದ ವಿರುದ್ಧ ನಿರ್ಭೀತಿಯಿಂದ ಧ್ವನಿ ಎತ್ತುವ ಕೆಲವು ಕಾಂಗ್ರೆಸ್ ನಾಯಕರನ್ನು ಮೂಲೆಗುಂಪು ಮಾಡಲಾಗುತ್ತಿದೆ. ನಿಷ್ಠಾವಂತ, ಸೈದ್ಧಾಂತಿಕ ಹಿನ್ನೆಲೆಯ ಕಾಂಗ್ರೆಸ್ ನಾಯಕರು ಮೂಲೆಗುಂಪಾದರೆ, ಕೇಸರಿ ಕಾಂಗ್ರೆಸಿಗರಿಗೆ ಹಾಗೂ ಅವರ ಆಪ್ತ ಸಂಘಿಗಳಿಗೆ ಅಧಿಕಾರ ಭಾಗ್ಯ ದೊರೆಯುತ್ತಿದೆ.