ಪೊಲೀಸರು ಸೀಜ್​ ಮಾಡಿದ್ದ ಕಾರಿನೊಳಗಿತ್ತು ಕೋಟಿಯಾಂತರ ಮೌಲ್ಯದ ಸೊತ್ತುಗಳು

ರಾಜ್ಯ

ಪೊಲೀಸರು ಸೀಜ್​ ಮಾಡಿದ್ದ ಕಾರು ಒಂದು ತಿಂಗಳಿನಿಂದ ಪೊಲೀಸ್​ ಠಾಣೆಯ ಮುಂಬಾಗ ಬಿಸಿಲು, ಮಳೆ ಎನ್ನದೆ ಕೊಳೆಯುತ್ತಿತ್ತು. ಆದರೆ ಕಾರಿನೊಳಗಿತ್ತು ಲಕ್ಷಾಂತರ ರೂಪಾಯಿ ಬೆಳೆಬಾಳುವ ಹಣ, ಚಿನ್ನಾಭರಣಗಳು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ರಾಜ್ಯದ ಮಾಜಿ ಶಿಕ್ಷಣ ‌ಸಚಿವ ದಿ. ಗೋವಿಂದೇಗೌಡರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ನೇಪಾಳಿ ಗ್ಯಾಂಗ್​ನ್ನು ಸಾಂಗ್ಲಿ ಪೊಲೀಸರ ನೆರವು ಪಡೆದು ಚಿಕ್ಕಮಂಗಳೂರು ಪೊಲೀಸರು ಬಂಧಿಸಿದ್ದರು. ಆ ವೇಳೆ ಆರೋಪಿಗಳು ಎಸ್ಕೇಪ್​ ಆಗಲು ಬಳಸಿದ್ದ ಕಾರನ್ನು ಸೀಜ್​ ಮಾಡಲಾಗಿತ್ತು. ಆದರೆ, ಈಗ ನ್ಯಾಯಾಲಯ ಕಾರನ್ನು ರಿಲೀಸ್​ ಮಾಡುವಂತೆ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಕಾರನ್ನು ಪರಿಶೀಲಿಸುವಾಗ ಕಾರಿನ ಸೀಟಿನಡಿಯಲ್ಲಿ ಹಣ, ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದೆ.

ಕಾರನ್ನು ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಕಾರಿನ‌ ಸೀಟ್ ಅಡಿಯಲ್ಲಿ 595 ಗ್ರಾಂ ಚಿನ್ನ, 589 ಗ್ರಾಂ ಬೆಳ್ಳಿ, 3,41,150 ರೂ. ಹಣ ಪತ್ತೆಯಾಗಿದೆ. ವಶಕ್ಕೆ ಪಡೆಯಲಾದ ಹಣ ಮತ್ತು ವಸ್ತುಗಳ ಮೌಲ್ಯ ಕೋಟಿಗೂ ಅಧಿಕ ಎನ್ನಲಾಗಿದ್ದು, ಕಳ್ಳತನವಾಗಿದ್ದ ಮೌಲ್ಯಕ್ಕಿಂತ ಅಧಿಕ ಚಿನ್ನ ಮತ್ತು ಬೆಳ್ಳಿ ಈ ವೇಳೆ ಪತ್ತೆಯಾಗಿದೆ. ಹೀಗಾಗಿ ಗ್ಯಾಂಗ್​ ಇನ್ನೂ ಹಲವೆಡೆ ಕೈಚಳಕ ತೋರಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಆಗಸ್ಟ್ 21ರಂದು ಬೆಳಗಿನ ಜಾವ ಕೊಪ್ಪ ಪೊಲೀಸ್​​​​​ ಠಾಣಾ ವ್ಯಾಪ್ತಿಯ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್​ನ, ಮಾಜಿ ಸಚಿವ ಗೋವಿಂದೇಗೌಡ ಅವರ ಪುತ್ರ ಹಾಗೂ ಎಸ್ಟೇಟ್ ಮಾಲೀಕ ಹೆಚ್​.ಜಿ. ವೆಂಕಟೇಶ್ ಮನೆಯಲ್ಲಿ ಕಳ್ಳತನ ನಡೆದಿತ್ತು. 6 ಲಕ್ಷ ನಗದು ಮತ್ತು 37,50,000 ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕದ್ದು ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಆರೋಪಿಗಳಿಗೆ ಬಲೆ ಬೀಸಿದ್ದ ಪೊಲೀಸರು, ಸಾಂಗ್ಲಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ನೇಪಾಳದ ರಾಜೇಂದ್ರ, ಏಕೇಂದ್ರ ಕುಟಲ್ ಬದ್ವಾಲ್​, ಕರಂ ಸಿಂಗ್​ ಬಹಾದ್ದೂರ್​ ಎಂಬುವರನ್ನು ಅರೆಸ್ಟ್​ ಮಾಡಿ ಒಂದೂವರೆ ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ಜಪ್ತಿ ಮಾಡಿದ್ದರು.