ಗೋಹತ್ಯೆ‌ ನಿಷೇಧ ಕಾಯ್ದೆ ನೆಪ; ವೃದ್ದೆ ತಾಯಿ ಸಾರಮ್ಮ ಅವರ ಮನೆ ಜಪ್ತಿ‌ ಮಾಡಿರುವುದು ಆತಂಕಕಾರಿ ಸಂಗತಿ.

ರಾಜ್ಯ

ಉತ್ತರಿಸಲು ಕಾಲಾವಕಾಶ ನೀಡದೆ, ನೋಟೀಸು ನೀಡಿದೆ, ವಾಸದ ಮನೆ ಜಪ್ತಿ ಮಾಡಿರುವುದು ಸಮರ್ಥನೀಯವಲ್ಲ, ಕಾನೂನು ಬದ್ದವೂ‌ ಅಲ್ಲ: ಮುನೀರ್ ಕಾಟಿಪಳ್ಳ

ಗೋಹತ್ಯೆ‌ ನಿಷೇಧ ಕಾಯ್ದೆ ನೆಪ ಮುಂದಿಟ್ಟು ಧರ್ಮಸ್ಥಳ ಠಾಣಾ ಪೊಲೀಸರು, ದನ ಸಾಗಾಟಗಾರರಿಗೆ ಜಾನುವಾರು ಮಾರಾಟ ಮಾಡಿದ ಜೊಹರಾ ಎಂಬವರು ವಾಸ ಇದ್ದ, ಆಕೆಯ ವೃದ್ದೆ ತಾಯಿ ಸಾರಮ್ಮ ಅವರ ಮನೆ ಜಪ್ತಿ‌ ಮಾಡಿರುವುದು ಆತಂಕಕಾರಿ ಸಂಗತಿ. FIR ನಲ್ಲಿ ಹೆಸರಿಲ್ಲದೆ, ಮನೆಯ ಆವರಣದಲ್ಲಿ ಜಾನುವಾರು ಹತ್ಯೆಯ ಯಾವ ಸಾಕ್ಷ್ಯ, ಆಧಾರವೂ ಇಲ್ಲದೆ, ಉತ್ತರಿಸಲು ಕಾಲಾವಕಾಶ ನೀಡದೆ, ನೋಟೀಸು ನೀಡಿದ ಅದೇ ದಿನ‌ ವಾಸದ ಮನೆ ಜಪ್ತಿ ಮಾಡಿರುವುದು ಸಮರ್ಥನೀಯ ಅಲ್ಲ, ಕಾನೂನು ಬದ್ದವೂ‌ ಅಲ್ಲ.

ಈ ಅಸಮರ್ಥನೀಯ ಜಪ್ತಿಯಿಂದ ಹದಿಹರೆಯದ ಹೆಣ್ಣು ಮಕ್ಕಳು, 70 ರ ಹರೆಯದ ವೃದ್ದೆ ಮನೆ ಕಳೆದುಕೊಂಡು ದಿಢೀರನೆ ಬೀದಿಗೆ ಬಂದಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಈ ಜಪ್ತಿ ನಿರ್ಧಾರವನ್ನು ವಾಪಾಸು ಪಡೆದು ಕುಟುಂಬಕ್ಕೆ ವಾಸದ ಮನೆಯನ್ನು ಬಿಟ್ಟುಕೊಡಬೇಕು ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಆಗ್ರಹಿಸುತ್ತದೆ. ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಈಗಾಗಲೆ ತಾಲೂಕು ಆಡಳಿತಕ್ಕೆ ಜಪ್ತಿ‌ ನಿರ್ಧಾರವನ್ನು ವಾಪಾಸು ಪಡೆಯಲು ಆಗ್ರಹಿಸಿ ಮನವಿ ನೀಡಿದೆ.

ಇಂತಹ ನಿಯಮ ಬದ್ದ ವಲ್ಲದ ನಿರಂಕುಶ ಕ್ರಮಗಳು ಜಿಲ್ಲಾಡಳಿತಕ್ಕೆ, ರಾಜ್ಯ ಸರಕಾರಕ್ಕೆ ಶೋಭೆ ತರುವುದಿಲ್ಲ, ಜನ ಸಮುದಾಯದ ನಡುವೆ ವ್ಯಾಪಕ ಅತೃಪ್ತಿಗೆ ಕಾರಣವಾಗುತ್ತದೆ ಎಂದು ಸಿಪಿಐಎಂ ಸಂಬಂಧ ಪಟ್ಟವರಿಗೆ ತಿಳಿಸಲು ಬಯಸುತ್ತದೆ.

ಬಹಳ ಮುಖ್ಯವಾಗಿ, ಬಿಜೆಪಿ ಸರಕಾರ ಜಾರಿಗೆ ತಂದಿರುವ ಗೋಹತ್ಯೆ ತಡೆ ಕಾಯ್ದೆ ಕೋಮು ರಾಜಕಾರಣದ ದುರುದ್ದೇಶ ಹೊಂದಿದೆ, ದುರುಪಯೋಗದ ಉದ್ದೇಶವನ್ನು ಹೊಂದಿದೆ ಎಂದು ಕಾಯ್ದೆ ಜಾರಿಯ ಸಂದರ್ಭ ಸಿಪಿಐಎಂ ಹಾಗು ಪ್ರಜಾಪ್ರಭುತ್ವವಾದಿ ಶಕ್ತಿಗಳು ಪ್ರಬಲ ವಿರೋಧ ವ್ಯಕ್ತಪಡಿಸಿದ್ದವು. ಆ ಸಂದರ್ಭ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷವು ಸಹ ಕಾಯ್ದೆಯ ವಿರುದ್ದ ಧ್ವನಿ‌ ಎತ್ತಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಕಾಯ್ದೆ ವಾಪಾಸು ಪಡೆಯುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು ಎಂಬುದನ್ನು ಈ ಸಂದರ್ಭ ನೆನಪಿಸಲು ಬಯಸುತ್ತದೆ, ಹಾಗೂ ಈ ರೈತ ವಿರೋಧಿ ಕರಾಳ ಕಾಯ್ದೆ ವಾಪಾಸು ಪಡೆದು ಇಂತಹ ನಿರಂಕುಶ, ಜನವಿರೋಧಿ ಅಮಾನವೀಯ ಕಾರ್ಯಾಚರಣೆಗಳಿಗೆ ಕೊನೆ ಹಾಡಬೇಕು ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.