ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ‘ಸಕ್ರಮ’ ಮರಳುಗಾರಿಕೆ.. ಆದರೆ ನಡೆಯುತ್ತಿರುವುದು ಅಕ್ರಮ.. ಅಕ್ರಮ!

ಕರಾವಳಿ

‘ಲೀಸ್’ ಹೆಸರಲ್ಲಿ ಗಡಿ ಗುರುತು ಮೀರಿ ಮರಳು ದೋಚುತ್ತಿದ್ದಾರೆ.. ಜಿಲ್ಲಾಡಳಿತ, ಗಣಿ ಇಲಾಖೆ ಮಾತ್ರ ಜಾಣ ಮೌನಕ್ಕೆ ಶರಣು!

‘ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ ಅಧಿಕಾರಿಗಳು ರಂಗೋಲಿ ಕೆಳಗೆ ನುಸುಳ್ತಾರೆ’ ಅನ್ನುವ ಗಾದೆ ಮಾತು ಚಾಲ್ತಿಯಲ್ಲಿದೆ. ಕಳ್ಳರು ಎಷ್ಟೇ ಚಾಣಾಕ್ಯರಾದರೂ ಅಧಿಕಾರಿಗಳ ಬುದ್ಧಿವಂತಿಕೆಯ ಎದುರು ಅವರ ಕಾರುಬಾರು ನಡೆಯುವುದಿಲ್ಲ ಅನ್ನುವುದು ಒಟ್ಟಾರೆ ಇದರ ಅರ್ಥ. ಆದರೆ ಈ ಮರಳುಗಾರಿಕೆ ವಿಷಯದಲ್ಲಿ ಈ ಗಾದೆ ಮಾತು ಸ್ವಲ್ಪ ಉಲ್ಟಾ-ಪಲ್ಟಾ ಆಗಿದೆ. ಅಧಿಕಾರಿಗಳು ಎಷ್ಟೇ ಬುದ್ಧಿವಂತರಾದರೂ ಈ ಮರಳುಗಾರಿಕೆ ನಡೆಸುವ ಮಂದಿ ಅದಕ್ಕಿಂತ ಡಬ್ಬಲ್ ಬುದ್ಧಿವಂತರಾಗಿರುತ್ತಾರೆ.! ಗಣಿ ಇಲಾಖೆ ಕಣ್ಣಿದ್ದು ಕುರುಡರಾಗಿ ಕೂತಿದೆಯೋ ಅಥವಾ ನಿದ್ದೆ ಬಂದವರಂತೆ ನಟಿಸುತ್ತಿದೆಯೋ ಅನ್ನುವುದು ಒಂದೂ ಅರ್ಥವಾಗುತ್ತಿಲ್ಲ.

ಕಳೆದ ಆರು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಅಕ್ರಮಗಳಿಗೆ ಪೂರ್ಣ ವಿರಾಮ ಬಿದ್ದಿತ್ತು. ಕಾರಣ ನಿಷ್ಠಾವಂತ ಪೊಲೀಸ್ ಅಧಿಕಾರಿ, ಕಮೀಷನರ್ ಸುಧೀರ್ ಕುಮಾರ್ ರೆಡ್ಡಿಯವರ ಖಡಕ್ಕ್ ಸಂದೇಶದಿಂದ ಎಲ್ಲವೂ ಗಪ್ ಚುಪ್ ಆಗಿತ್ತು. ಇದರ ಮಧ್ಯೆ ಮರಳುಗಾರಿಕೆಗೆ ಜಿಲ್ಲಾಢಳಿತ ಸಕ್ರಮವಾಗಿ ಕೆಲವು ಕಡೆ ಪರ್ಮೀಷನ್ ನೀಡಿತ್ತು. ಈ ಮಧ್ಯೆ ರಾಜ್ಯ ಸರಕಾರ ಕೆಲವೊಂದು ನಿಯಮಗಳನ್ನು ಬದಲಾವಣೆ ಮಾಡಿ ಸಕ್ರಮ ಮರಳುಗಾರಿಕೆ ನಡೆಸಲು ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಸ(ಅ)ಕ್ರಮ ಮರಳುಗಾರಿಕೆ ಪುನಃ ಆರಂಭಗೊಂಡಿದೆ.

ಈ ಮೊದಲು 3 ಯೂನಿಟ್ ಮರಳಿಗೆ ಎಂಟು ಸಾವಿರದಿಂದ ಹತ್ತು ಸಾವಿರ ಒಳಗಡೆ ಗ್ರಾಹಕರಿಗೆ ಸುಲಭವಾಗಿ ದೊರೆಯುತ್ತಿತ್ತು. ಗ್ರಾಹಕರಿಗೆ ಅನುಕೂಲವಾಗಿತ್ತು. ಆದರೆ ಸರಕಾರ ಅಕ್ರಮ ಮರಳುಗಾರಿಕೆ ಮಟ್ಟ ಹಾಕಿ ಮರಳಿನ ವ್ಯಾಪಾರಿಗಳ ಜುಟ್ಟನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿದೆ. ಎಲ್ಲೇ ಮರಳುಗಾರಿಕೆ ನಡೆಸಿದರೂ ನೇರವಾಗಿ ಗ್ರಾಹಕರಿಗೆ ಮರಳು ಸರಬರಾಜು ಮಾಡುವಂತಿಲ್ಲ. ಸರಕಾರ ಆರಂಭಿಸಿರುವ ಸ್ಯಾಂಡ್ ಆ್ಯಪ್ ಮೂಲಕವೇ ಬುಕ್ ಮಾಡಿ ಆನಂತರ ಗ್ರಾಹಕರಿಗೆ ಮರಳು ಪೂರೈಕೆ ಮಾಡಬೇಕಾಗಿದೆ. ಈ ಆ್ಯಪ್ ಮೂಲಕ ಬುಕ್ ಮಾಡಬೇಕಾದರೆ ಹತ್ತು ಟನ್ (ಎರಡು ಮುಕ್ಕಾಲು ಯುನಿಟ್) ಮರಳಿಗೆ 11,850 ರೂಪಾಯಿ, ಎರಡು ಸಾವಿರ ಮರಳು ಪೂರೈಕೆ ಮಾಡುವ ವಾಹನದ ಬಾಡಿಗೆಗೆ ಹಣ ಸಂದಾಯ ಮಾಡಬೇಕಾಗಿದೆ. ಒಟ್ಟು 10 ಟನ್ ಮರಳು ಮತ್ತು ಬಾಡಿಗೆ ಸೇರಿ ಹೆಚ್ಚು ಕಮ್ಮಿ 13,850 ರೂ ಪಾವತಿಸಬೇಕು. ನಾವೇ ನೇರ ಅ್ಯಪಲ್ಲಿ ಮರಳು ಬುಕ್ ಮಾಡಿದರೆ ಮರಳು ಪೂರೈಕೆದಾರರಿಗೆ ಹೆಚ್ಚಿನ 2,000 ರೂ. ಕ್ಯಾಶ್ ನೀಡಬೇಕು. ಈ ಬಗ್ಗೆ ವಿಚಾರಿಸಿದರೆ ಮರಳು ಜಾಸ್ತಿ ಹಾಕುತ್ತೇವೆ ಎಂಬ ದರ್ಪದ ಉತ್ತರ. ಕಾನೂನು ಮಾತಾಡಿದರೆ ಮರಳು ಇಲ್ಲ, ಮಾತು ಬೇರೆ. ಇದು ಹಗಲು ದರೋಡೆ.!ಗ್ರಾಹಕರಿಂದ ಹೆಚ್ಚುವರಿಯಾಗಿ ಬಾಡಿಗೆ ದರ ಎಂದು 2000 ಸಾವಿರ ರೂಪಾಯಿ ಪ್ರತ್ಯೇಕವಾಗಿ ವಸೂಲಿ ಮಾಡಲಾಗುತ್ತದೆ. ಆಪ್ ನಲ್ಲಿ ಸಂದಾಯ ಮಾಡಿರುವ ಬಾಡಿಗೆ ದರವನ್ನು ವ್ಯಾಪಾರಿಗಳೇ ಮಾಯ ಮಾಡುತ್ತಾರಂತೆ.! ಜನಸಾಮಾನ್ಯರಿಗೆ ನಿರ್ಮಾಣ ಕಾರ್ಯಕ್ಕೆ ಮರಳು ಅಗತ್ಯವಿರುದರಿಂದ ಎರಡು ಸಾವಿರ ರೂಪಾಯಿ ಬಾಡಿಗೆ ಪ್ರತ್ಯೇಕ ನೀಡಿ ಖರೀದಿಸುತ್ತಾರೆ. ಈ ಬಗ್ಗೆ ಸೊಲ್ಲು ಎತ್ತುತ್ತಿಲ್ಲ. ಕಾನೂನನ್ನು ಹೇಗೆ ದುರ್ಬಳಕೆ ಮಾಡಿಕೊಂಡು ದುಡ್ಡು ಮಾಡಬಹುದು ಅನ್ನುವುದಕ್ಕೆ ಮರಳು ಕುಳಗಳ ಇದೊಂದು ಜ್ವಲಂತ ಉದಾಹರಣೆ ಅಷ್ಟೇ.

ಇವಿಷ್ಟೇ ಅಲ್ಲ, ಜನಸಾಮಾನ್ಯರು ದುಡ್ಡು ಪಾವತಿ ಮಾಡಿದರೂ ಮರಳು ಸಿಗಬೇಕಾದರೆ ಒಂದು ವಾರ ಕಾಯಬೇಕು, ಕ್ಯೂ ನಿಲ್ಲಬೇಕು, ಟೋಕನ್ ಬೇರೆಯೇ.! ಮರಳಿನ ಹೆಸರಿನಲ್ಲಿ ಗ್ರಾಹಕರನ್ನು ಸತಾಯಿಸುವ ಕೆಲಸ ಈಗ ಆರಂಭವಾಗಿದೆ. ಈ ಮಧ್ಯೆ ಒಳಗೊಳಗೇ ಡೀಲ್ ನಡೆಸಿ ಏಜೆಂಟರಿಗೆ ಬೇಕಾಬಿಟ್ಟಿಯಾಗಿ ಮರಳು ಪೂರೈಕೆಯಾಗುತ್ತಿದೆ. ಆದರೆ ಜನಸಾಮಾನ್ಯರಿಗೆ ಒಂದೆರೆಡು ಲೋಡ್ ಮರಳು ಸಿಗಬೇಕಾದರೆ ವಾರಗಟ್ಟಲೆ ಕಾಯಬೇಕಾಗಿದೆ. ಸರಕಾರ ಜನರಿಗೆ ಉಪಯೋಗವಾಗಲೆಂದೇ ಸಕ್ರಮ ಮರಳುಗಾರಿಕೆಗೆ ಅವಕಾಶ ಕಲ್ಪಿಸಿದೆ. ಆದರೆ ಮರಳು ಲೀಸ್ ದಾರರು ಕಾನೂನನ್ನೇ ತಿರುಚಿ ರಂಗೊಲಿ ಕೆಳಗೆ ನುಸುಳಿದ್ದಾರೆ. ಅವರಿಗೆ ಟೋಕನೂ ಇಲ್ಲ, ಕ್ಯೂ.. ಇಲ್ಲ. ಅವರ ಸ್ವಂತ ಲಾರಿಗಳು ಕ್ಯೂ ನಿಲ್ಲದೆ ನಿರಂತರವಾಗಿ ಮರಳು ಸಾಗಾಟ ಮಾಡಬಹುದು. ಕಾರಣ ಒಮ್ಮೆಲೆ ಬೇಕಾದ ರೀತಿಯಲ್ಲಿ ಇವರ ವಾಹನಕ್ಕೆ ಬಲ್ಕ್ ಪರ್ಮೀಟ್ ತೆಗೆದಿಡುತ್ತಾರೆ. ಅವರಿಗೆ ಬೇಕಾದವರಿಗೆ ಸಪ್ಲೈ ಮಾಡುತ್ತಾರೆ. ಇವರಿಗೆ ಕಾನೂನು ಬಾಧಕವಲ್ಲ.! ಆದರೆ ಜನಸಾಮಾನ್ಯರಿಗೆ ಮಾತ್ರ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವ ಉಂಟಾಗಿದೆ. ಕಾನೂನು ಪ್ರಕಾರ ಮರಳು ಯಾರ್ಡ್ ನಲ್ಲಿ ತೂಕ ಮಾಡಲು, ತೂಕ ಮಾಪನ ಯಂತ್ರ ಅಳವಡಿಸಬೇಕು. ತೂಕ ಮಾಪನದ ರಶೀದಿ ನೀಡಬೇಕು. ಕೆಲವು ಕಡೆ ತೂಕ ಮಾಪನ ಯಂತ್ರ ಮಾಯ.! ಮಾಪನ ಯಂತ್ರ ಇಲ್ಲವೇ ಇಲ್ಲ. ಯಾರ್ಡಿಗೆ ಮರಳು ಹಾಕಲ್ಲ, ದೋಣಿಯಿಂದ ನೇರವಾಗಿ ಲಾರಿಗಳಿಗೆ ಮರಳು ತುಂಬಿಸಲಾಗುತ್ತಿದೆ. ಇದೆಲ್ಲವೂ ನಿಯಮದ ಉಲ್ಲಂಘನೆ, ಕಾನೂನು ಬಾಹಿರ.

ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಕ್ರಮ ಮರಳುಗಾರಿಕೆಗೆ ಅನುಮತಿ ನೀಡುವಾಗ ಗಡಿ ಗುರುತು ಗಳನ್ನು ನೀಡಿಯೇ ಅವಕಾಶ ಕಲ್ಪಿಸಿದೆ. 2 ಎಕ್ರೆ, 5 ಎಕರೆ ಹೀಗೆ ಲೀಸ್ ನೀಡಿದೆ. ಆದರೆ ತಮಗೆ ಸಿಕ್ಕ ಲೀಸ್ ಅನ್ನೇ ಮರಳುಗಾರಿಕೆ ನಡೆಸುವವರು ದುರುಪಯೋಗ ಪಡಿಸಿ ತಮ್ಮ ವ್ಯಾಪ್ತಿ ಬಿಟ್ಟು ಮರಳುಗಾರಿಕೆ ಮಾಡುತ್ತಾರೆ. ಇದು ಸಕ್ರಮವೊ.. ಅಕ್ರಮವೊ.. ಅಧಿಕಾರಿಗಳು ಉತ್ತರಿಸಬೇಕಿದೆ. ಕೆಲವು ನಿರ್ಬಂಧಿತ ಪ್ರದೇಶಗಳಿಗೂ ತೆರಳಿ ಮರಳುಗಾರಿಕೆ ನಡೆಸಲಾಗುತ್ತಿದೆ. ಹೆಸರಿಗೆ ಮಾತ್ರ ಸಕ್ರಮ ಮರಳುಗಾರಿಕೆ; ಆದರೆ ನಡೆಯುತ್ತಿರುವುದೆಲ್ಲವೂ ಅಕ್ರಮ..ಅಕ್ರಮ. ಸೇತುವೆ, ಅಣೆಕಟ್ಟು ಪಕ್ಕದಲ್ಲೂ ಜಿಲ್ಲೆಯ ಹಲವು ಕಡೆ ಮರಳುಗಾರಿಕೆ ನಡೆಯುತ್ತಿದೆ. ಗಡಿ ಗುರುತುಗಳನ್ನು ಮೀರಿ ನೂರಾರು ಮೀಟರ್ ಆಚೆಗೂ ಹೋಗಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ. ಇದೀಗ ಜಿಲ್ಲಾಡಳಿತದ ಹೊಸ ಲೀಸ್ ಪ್ರಕ್ರಿಯೆ ಮರಳು ಕದಿಯಲು ಪರ್ಮೀಶನ್ ನೀಡಿದಂತಾಗಿದೆ! ಇದು ಹೀಗೆಯೇ ಮುಂದುವರೆದರೆ ಕಾನೂನಿನ ಅಡಿಯಲ್ಲೇ ದೋಚುವ ದಂಧೆ ಯಥೇಚ್ಛವಾಗಬಹುದು. ಇನ್ನಾದರೂ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಡಿ ಗುರುತು ಮೀರಿ ಅಕ್ರಮ ಮರಳುಗಾರಿಕೆ ನಡೆಸುವವರ ಲೀಸ್ ರದ್ದುಪಡಿಸುವ ಕೆಲಸ ಮಾಡಬೇಕಾಗಿದೆ. ಇಲ್ಲವಾದರೆ ಈ ‘ಸಕ್ರಮ’ ಅನ್ನುವ ಪದಕ್ಕೆ ಅರ್ಥವೇ ಇಲ್ಲದಂತಾಗಬಹುದು.