ವಾಮಂಜೂರು: ಬಿಲ್ಲವರ ಸಂಘದ ಆಸ್ತಿಯನ್ನು ಕಾನೂನುಬಾಹಿರವಾಗಿ ವರ್ಗಾಯಿಸಿ, ಅವ್ಯವಹಾರ ಪ್ರಕರಣ

ಕರಾವಳಿ

ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ

ವಾಮಂಜೂರಿನ ‘ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ಸರಕಾರ ಆದೇಶಿಸಿದೆ. ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಂಘಸಂಸ್ಥೆಗಳ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ಸೊಸೈಟಿ ರಿಜಿಸ್ಟ್ರೇಷನ್ ಕಾಯಿದೆ ಪ್ರಕಾರ 1993 ರಲ್ಲಿ ನೋಂದಣಿಗೊಂಡಿದೆ. 2005 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ತಿರುವೈಲ್ ಗ್ರಾಮದ ಸರ್ವೇ ನಂಬ್ರ 9/1ಎ1ಬಿ ಯಲ್ಲಿ 10 ಸೆಂಟ್ಸ್ ಜಮೀನನ್ನು ಮಂಜೂರು ಮಾಡಿದ್ದರು. ಸದ್ರಿ ಜಮೀನಿನಲ್ಲಿ ಸಂಸ್ಥೆಯವರು ಕಟ್ಟಡ ಕಟ್ಟಿಸಿ, ಅದರ ಬಾಡಿಗೆ ಮತ್ತು ದಾನಿಗಳ ನೆರವಿನಿಂದ ಸಂಸ್ಥೆ ಕಾರ್ಯಾಚರಿಸಿ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ.

ಆದರೆ ಕೋವಿಡ್ 19 ರ ಸಮಯದಲ್ಲಿ ಕಾಂತಪ್ಪ ಪೂಜಾರಿ, ಬಾಲಕೃಷ್ಣ ಎಸ್ ಕರ್ಕೇರಾ, ಜಿ. ಕೃಷ್ಣ ಕೋಟ್ಯಾನ್, ಯೋಗೀಶ್ ಸುವರ್ಣ, ಕಿಶೋರ್ ಕುಮಾರ್, ಐತಪ್ಪ ಪೂಜಾರಿ ಎಂಬವರು ‘ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಟ್ರಸ್ಟ್’ ಎಂಬ ಖಾಸಗಿ ಟ್ರಸ್ಟ್ ಅನ್ನು 2022 ಮಾರ್ಚ್ ನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿದ್ದರು. ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವರ ಸಂಘದ ಆಸ್ತಿಯಾದ ಸದ್ರಿ 10 ಸೆಂಟ್ಸ್ ಜಮೀನು ಮತ್ತು ಕಟ್ಟಡವನ್ನು 2022 ಅಕ್ಟೋಬರ್ ತಿಂಗಳಲ್ಲಿ ಕಾನೂನು ಬಾಹಿರವಾಗಿ ಖಾಸಗಿ ಟ್ರಸ್ಟ್ ಗೆ ವರ್ಗಾಯಿಸಿದ್ದು, ಈ ಹಿಂದೆ ಕಾರ್ಯಾಚರಿಸುತ್ತಿದ್ದ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವರ ಸಂಘ ವನ್ನು ವಿಸರ್ಜಿಸಿದ್ದರು. ಈ ಆರು ಮಂದಿ ಕಾನೂನು ಬಾಹಿರವಾಗಿ ನಿರ್ಣಯ ಮಾಡಿ ಬಿಲ್ಲವರ ಸಂಘವನ್ನು ಹಾಗೂ ಸಂಘದ ಆಸ್ತಿಯನ್ನು ಒಳ ಹಾಕಿದ್ದಲ್ಲದೆ, ಬಾಡಿಗೆದಾರರಿಂದ ಬಂದ ಹಣವನ್ನು ಕೂಡ ಲಪಟಾಯಿಸಿ ಬಿಲ್ಲವ ಸಮಾಜ ಮತ್ತು ಸಂಘಕ್ಕೆ ದ್ರೋಹವೆಸಗಿದ್ದು, ಸಂಘದ ವಾರ್ಷಿಕ ಮಹಾಸಭೆಯನ್ನು ಕರೆಯದೇ ತಮ್ಮ ಖಾಸಗಿ ಸ್ವತ್ತಿನ ರೀತಿ ಸಂಸ್ಥೆಯನ್ನು ಬಳಸಿಕೊಂಡಿರುತ್ತಾರೆ. ಈ ಬಗ್ಗೆ ಸಂಘದ ಇತರರು ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಿದ್ದರು.

ಸಹಕಾರಿ ಸಂಘಗಳ ಹಾಗೂ ಸಂಘ ಸಂಸ್ಥೆಗಳ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ತನಿಖೆಯಾಗಿ, ಈ ಆರು ಮಂದಿ ಅವ್ಯವಹಾರ ನಡೆಸಿರುವುದು ಹಾಗೂ ಖಾಸಗಿ ಟ್ರಸ್ಟ್ ಗೆ ಬಿಲ್ಲವ ಸಂಘದ ಆಸ್ತಿಯನ್ನು ದಾನಪತ್ರ ಮೂಲಕ ವರ್ಗಾಯಿಸಿರುವುದು ಕಾನೂನು ಬಾಹಿರವೆಂದು ಘೋಷಿಸಿದ್ದಲ್ಲದೆ ಸಂಸ್ಥೆಗೆ , ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸಲು 2025 ಜನವರಿ ತಿಂಗಳಲ್ಲಿ ಸರಕಾರಕ್ಕೆ ಶಿಫಾರಸು ಮಾಡಿತ್ತು. ಅದರಂತೆ ಕರ್ನಾಟಕ ಸರಕಾರವು ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಫ್ ಕೋ ಆಪರೇಟಿವ್ ಸೊಸೈಟಿ ಮಂಗಳೂರು ಇವರನ್ನು 09-09-2025 ರ ಸರಕಾರದ ಆದೇಶದಂತೆ ಬಿಲ್ಲವ ಸಂಘಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. ನೋಂದಾಯಿತ ಬಿಲ್ಲವರ ಸಂಘದ ಹೆಸರಿನ ಬ್ಯಾಂಕ್ ಖಾತೆಗೆ ಬಾಡಿಗೆದಾರರು ಬಾಡಿಗೆ ಪಾವತಿಸುವಂತೆ ಸೂಚಿಸಲಾಗಿದೆ.

ಆಡಳಿತಾಧಿಕಾರಿಯವರು ಬಿಲ್ಲವರ ಸಂಘಕ್ಕೆ ಚುನಾವಣೆ ನಡೆಸಿ ಆಡಳಿತ ಕಮಿಟಿಯನ್ನು ರಚಿಸಬೇಕಿದೆ. ನೋಂದಾಯಿತ ಸಂಸ್ಥೆಯ ಆಸ್ತಿಯನ್ನು ಖಾಸಗಿ ಟ್ರಸ್ಟ್ ನಿಂದ ಬಿಡಿಸಿ, ಸಂಸ್ಥೆಯ ಹೆಸರಿಗೆ ಮರುಸ್ಥಾಪಿಸಬೇಕಾಗಿದೆ. ಸಂಘದ ಆಸ್ತಿಯನ್ನು ದುರುಪಯೋಗ ಪಡಿಸಿ ಮೋಸ, ವಂಚನೆ, ಅವ್ಯವಹಾರ ನಡೆಸಿದವರ ವಿರುದ್ಧ ಕ್ರಿಮಿನಲ್ ದೂರನ್ನು ಸಲ್ಲಿಸಲಾಗಿದೆ.