ಡಿವೈಎಫ್ಐ ಮುಖಂಡರು, ವಕೀಲರಾಗಿರುವ ನಿತಿನ್ ಕುತ್ತಾರ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ವೃತ್ತಿ ಧರ್ಮಕ್ಕೆ ಅಪಮಾನ ಮಾಡಿರುವ ಆರೋಪದಲ್ಲಿ ಮಂಗಳೂರು ನಗರ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷರಾಗಿರುವ ಬಾಲಕೃಷ್ಣ ಎಂಬವರ ವಿರುದ್ಧ ಪೊಲೀಸ್ ಆಯುಕ್ತರಿಗೆ, ಮೇಲಾಧಿಕಾರಿಗಳಿಗೆ, ಮಾನವ ಹಕ್ಕು ಆಯೋಗಕ್ಕೂ ದೂರು ಸಲ್ಲಿಸಲಾಗಿದೆ.
ಮಂಗಳೂರು ನಗರದಲ್ಲಿ ಏಳೆಂಟು ವರ್ಷಗಳಿಂದ ವಕೀಲ ವೃತ್ತಿ ನಡೆಸಿಕೊಂಡು ಬರುವ ಯುವ ವಕೀಲ ನಿತಿನ್ ಕುತ್ತಾರ್ ನವೆಂಬರ್ 13 ರಂದು ಕೌಟುಂಬಿಕ ವಿಚಾರವಾಗಿ ಕಕ್ಷಿದಾರರ ಪರವಾಗಿ ಮಂಗಳೂರು ನಗರ ಮಹಿಳಾ ಠಾಣೆಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಠಾಣೆಯ ನಿರೀಕ್ಷಕರಾದ ಬಾಲಕೃಷ್ಣ ರವರು ಕಕ್ಷಿದಾರರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ದೂರುಗಳು ಕೇಳಿ ಬಂದಿದೆ.
ಪ್ರೇಮ್ ಪ್ರಕಾಶ್ ಡಿಸೋಜ ರವರ ಮನೆಗೆ ಮಂಗಳೂರು ನಗರ ಮಹಿಳಾ ಠಾಣೆಯ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ನಿಮ್ಮ ಮೇಲೆ ಕೌಟುಂಬಿಕ ವಿಚಾರವಾಗಿ ದೂರು ಬಂದಿದೆ, ಠಾಣೆಗೆ ಬರುವಂತೆ ಹೇಳಿದರು. ಇದರಂತೆ ವಕೀಲ ನಿತಿನ್ ಕುತ್ತಾರ್ ಜತೆ ಪ್ರೇಮ್ ಪ್ರಕಾಶ್ ಮತ್ತಾತನ ತಾಯಿ ಠಾಣೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಠಾಣಾ ನಿರೀಕ್ಷಕರ ಸಮ್ಮುಖದಲ್ಲಿ ಪ್ರೇಮ್ ಪ್ರಕಾಶ್ ಪತ್ನಿಗೆ ಡೈವೋರ್ಸ್ ನೀಡಲು ಒಪ್ಪಿಕೊಂಡಿದ್ದರು. ಮಗುವಿನ ಚಿನ್ನ ಈಗಾಗಲೇ ತಂದು ಕೊಡಬೇಕು, ಇಲ್ಲದಿದ್ದರೆ ಎಫ್ಐಆರ್ ದಾಖಲಿಸಿ ಜೈಲಿಗೆ ಹಾಕುವುದಾಗಿ ಬೆದರಿಸಿದ್ದರು. ಕಕ್ಷಿದಾರರ ಪರವಾಗಿ ಠಾಣೆಗೆ ಬಂದಿದ್ದ ವಕೀಲ ನಿತಿನ್ ಕುತ್ತಾರ್ ಉದ್ದೇಶಿಸಿ ಏಕವಚನದಲ್ಲಿ ನಿಂದಿಸಿರುವುದು ಮಾತ್ರವಲ್ಲ ವೃತ್ತಿ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಕಕ್ಷಿದಾರರ ಸಮ್ಮುಖದಲ್ಲಿ ಮಾತನಾಡಿದ್ದು, ಹೋರಾಟ ಹೊರಗೆ ಇರಲಿ, ಇಲ್ಲಿ ನಡೆಯಲ್ಲ, ನಿನ್ನ ಕರಿಕೋಟು ಕೋರ್ಟಲ್ಲಿ ಇರಲಿ ಎಂದು ಬೆದರಿಸಿರುವುದಾಗಿ ನಿತಿನ್ ಕುತ್ತಾರ್ ರವರು ಅಖಿಲ ಭಾರತ ವಕೀಲರ ಒಕ್ಕೂಟದ ನಿಯೋಗದ ಜೊತೆ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

ಇನ್ಸ್ ಪೆಕ್ಟರ್ ಬಾಲಕೃಷ್ಣ ವಿರುದ್ಧ ಈ ಹಿಂದೆಯೂ ಹಲವಾರು ಆರೋಪಗಳು ಕೇಳಿ ಬಂದಿತ್ತು. ಲಂಚ ಪಡೆದ ಆರೋಪದ ಮೇರೆಗೆ ಹಾಗೂ ಅಕ್ರಮ ಆಸ್ತಿ ಹೊಂದಿದ ಆರೋಪದಲ್ಲಿ ಎಸಿಬಿ ಯಲ್ಲಿ ಪ್ರಕರಣ ದಾಖಲಾಗಿ ವಿಚಾರಣಾ ಹಂತದಲ್ಲಿದೆ. ಉಳ್ಳಾಲ ಠಾಣೆ ನಿರೀಕ್ಷಕರಾಗಿದ್ದ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು. ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಹಾಡಹಗಲೇ ಕೋಟೆಕಾರ್ ಬ್ಯಾಂಕ್ ರಾಬರಿ ಪ್ರಕರಣ ನಡೆದಿತ್ತು. ಈ ಪ್ರಕರಣ ರಾಜ್ಯ ಸರ್ಕಾರವನ್ನು ತಲೆತಗ್ಗಿಸುವಂತೆ ಮಾಡಿತ್ತು. ಈ ಪ್ರಕರಣದಲ್ಲಿ ನಿರೀಕ್ಷಕರ ಮೇಲೆ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಲಾಖೆ ದೀರ್ಘ ರಜೆಯಲ್ಲಿ ತೆರಳಲು ಆದೇಶಿಸಿತ್ತು. ಅಲ್ಲದೆ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪಾಲಿಸದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ, ವಿಚಾರಣೆಯ ಹಂತದಲ್ಲಿದೆ. ಉಳ್ಳಾಲ ಠಾಣೆ ನಿರೀಕ್ಷಕರಾಗಿದ್ದ ಅವಧಿಯಲ್ಲಿ ತಲಪಾಡಿಯ ಬಜರಂಗದಳದ ಕಾರ್ಯಕರ್ತನನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆದು ಹಾಕಿದ್ದರು. ಆದರೆ ಕಾಂಗ್ರೆಸ್ ಕಾರ್ಯಕರ್ತ ರೌಡಿಶೀಟರ್ ಒಬ್ಬನ ಹೆಸರನ್ನು ಹಾಗೆಯೇ ಉಳಿಸಿದ್ದರು. ಹೀಗೆ ಕರ್ತವ್ಯದಲ್ಲಿ ಪಕ್ಷ ಭೇದ ತೋರಿದ್ದರ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ದೂರು ಹೋಗಿ ಸಸ್ಪೆಂಡ್ ಆಗಿದ್ದರು. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಎಸಿಬಿ ದಾಳಿಗೂ ಗುರಿಯಾಗಿದ್ದರು. ಇದೀಗ ಕಕ್ಷಿದಾರರ ಪರವಾಗಿ ಠಾಣೆಗೆ ತೆರಳಿದ ಯುವ ವಕೀಲನಿಗೆ ಅವಾಚ್ಯ ಶಬ್ದಗಳಿಂದ ಬೈದು ಅವಮಾನಿಸಿದ ದೂರುಗಳು ಕೇಳಿ ಬಂದಿದೆ.

ಈ ಬಗ್ಗೆ ಯುವ ವಕೀಲ ರಾಜ್ಯ ಮಾನವಹಕ್ಕು ಆಯೋಗ, ಪೊಲೀಸ್ ದೂರು ಪ್ರಾಧಿಕಾರ, ಪೊಲೀಸ್ ಮಹಾ ನಿರ್ದೇಶಕರು, ಬೆಂಗಳೂರು ಇವರಿಗೆ ಲಿಖಿತವಾಗಿ ದೂರು ನೀಡಿರುತ್ತಾರೆ. ಮಂಗಳೂರು ಪೊಲೀಸ್ ಆಯುಕ್ತರಾಗಿ ಸುಧೀರ್ ಕುಮಾರ್ ರೆಡ್ಡಿಯವರು ಬಂದ ನಂತರ ಪೊಲೀಸ್ ಇಲಾಖೆಗೆ ವರ್ಚಸ್ಸು, ಇಮೇಜ್ ಬಂದಿದೆ. ಜಿಲ್ಲೆಯ ಪೊಲೀಸರು ಜನ ಸ್ನೇಹಿ ಪೊಲೀಸರಾಗಿ ಗೌರವ ಪಡೆಯುತ್ತಿದ್ದಾರೆ. ಆದರೆ ಕೆಲವೊಂದು ಆಯಕಟ್ಟಿನ ಸ್ಥಾನಗಳಲ್ಲಿ ಕೂತಿರುವ ಪೊಲೀಸ್ ಅಧಿಕಾರಿಗಳಿಂದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ದಕ್ಷ ಪೊಲೀಸ್ ಆಯುಕ್ತರು ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ನಾಗರಿಕರಿಂದ ಆಗ್ರಹಗಳು ಕೇಳಿ ಬರುತ್ತಿದೆ.
