ಕಬಕ ಗ್ರಾಮದ ನೆಹರು ನಗರದಲ್ಲಿ ನಿಲ್ಲಿಸಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಗಳನ್ನು ಕಳವು ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಪುತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಅಶ್ಲೇಷ ಭಟ್, ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್, ವಿಜಯ್ ಶೆಟ್ಟಿ ಹಾಗೂ ಅಶ್ರಫ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕಳವಾಗಿದ್ದ 80 ಗೋಣಿ ಕಾಫಿ ಬೀಜಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಸ್ವಿಫ್ಟ್ ಕಾರು ಹಾಗೂ ಎರಡು ಆಟೋ ರಿಕ್ಷಾಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುತ್ತೂರು ಕಬಕ ನಿವಾಸಿ ತೃತೇಶ್ (29) ಎಂಬವರು KA 19 AB 2258 ನೇ ಲಾರಿಯ ಮಾಲಕ ಮತ್ತು ಚಾಲಕನಾಗಿದ್ದು, ದಿನಾಂಕ: 03-12-2025 ರಂದು ಪಿರಿಯಾ ಪಟ್ಟಣದ ಕಾಫಿ ಕ್ಯೂರಿಂಗ್ ಕಂಪೆನಿಯೊಂದರಿಂದ ತಲಾ 60 ಕೆಜಿ ತೂಕದ 320 ಗೋಣಿ ಚೀಲ ಬ್ಯಾಗ್ ಗಳನ್ನು ಲೋಡ್ ಮಾಡಿಕೊಂಡು ಮಂಗಳೂರಿಗೆ ತೆರಳುತ್ತಿದ್ದವರು, ಅದೇ ದಿನ ರಾತ್ರಿ ಪುತ್ತೂರಿಗೆ ತಲುಪಿ, ಕಬಕ ನೆಹರೂ ನಗರ ಎಂಬಲ್ಲಿ ರಸ್ತೆ ಬದಿಯಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ಡೋರ್ ಲಾಕ್ ಮಾಡಿ ತನ್ನ ಮನೆಗೆ ತೆರಳಿರುತ್ತಾರೆ. ಡಿಸೆಂಬರ್ 4 ರಂದು ಬೆಳಿಗ್ಗೆ ಮರಳಿ ಬಂದು ಲಾರಿಯನ್ನು ಚಲಾಯಿಸುತ್ತಾ ಮಧ್ಯಾಹ್ನ ವೇಳೆ ಮಂಗಳೂರಿನ ಬಂದರಿಗೆ ತಲುಪಿರುತ್ತಾರೆ. ಈ ವೇಳೆ ಕಂಪೆನಿಯವರು ಕ್ವಾಲಿಟಿ ಚೆಕ್ ಮಾಡಲು ಬಂದಾಗ, ಲಾರಿಯ ಹಿಂಬದಿಯ ಸೀಲ್ ಲಾಕ್ ತುಂಡಾಗಿರುವುದು ಕಂಡು ಬಂದಿದ್ದು, ಲೋಡನ್ನು ಪರಿಶೀಲಿಸಿದಾಗ, ಲಾರಿಯಲ್ಲಿದ್ದ ಕಾಫಿ ಬೀಜ ತುಂಬಿದ ಗೋಣಿಚೀಲಗಳ ಪೈಕಿ ಸುಮಾರು ರೂ 21,44,000/-ಮೌಲ್ಯದ 80 ಗೋಣಿ ಚೀಲಗಳು ಕಳವಾಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ, ಅ.ಕ್ರ: 120/2025 ಕಲಂ: 303(2) ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
