ಪಾಕಿಸ್ತಾನ ಪರ ಗೌಪ್ಯ ಮಾಹಿತಿ ರವಾನೆ; ಆರೋಪಿಗಳಿಗೆ ಸಿಮ್ ಕಾರ್ಡ್ ನೀಡುತ್ತಿದ್ದ ಗುಜರಾತ್ ಮೂಲದ ಹೀರೇಂದ್ರ ಕುಮಾರ್ ಖಡಯಾತ್ ಬಂಧನ

ರಾಷ್ಟ್ರೀಯ

ಉಡುಪಿ: ಕಳೆದ ಕೆಲವು ದಿನಗಳ ಹಿಂದೆ ಭಾರತ ನೌಕಾ ಪಡೆಯ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಇಲ್ಲಿನ ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನ ಇಬ್ಬರು ನೌಕರರನ್ನು ಈಗಾಗಲೇ ಬಂಧಿಸಲಾಗಿದ್ದು, ಅವರಿಗೆ ಸಿಮ್ ಕಾರ್ಡ್ ಪೂರೈಸುತ್ತಿದ್ದ ಇನ್ನೊಬ್ಬ ಆರೋಪಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗುಜರಾತಿ‌ನ ಕೈಲಾಸ್ ನಗರಿ ನಿವಾಸಿ ಹೀರೇಂದ್ರ ಕುಮಾರ್ ಖಡಯಾತ್ ಎಂದು ಗುರುತಿಸಲಾಗಿದೆ.

ಈತ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಉದ್ಯೋಗಿಯಾಗಿದ್ದಾನೆ. ಎರಡು ವಾರಗಳ ಹಿಂದೆ ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ರೋಹಿತ್‌ ಮತ್ತು ಸಂತ್ರಿ ಎಂಬವರು ಇಲ್ಲಿಗೆ ದುರಸ್ತಿಗೆ ಬರುತ್ತಿದ್ದ ಭಾರತೀಯ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್‌ ಮತ್ತಿತರ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು.

ವಾಟ್ಸ್‌ ಆ್ಯಪ್ ಮೂಲಕ ಪಾಕಿಸ್ತಾನಕ್ಕೆ ರವಾನಿಸಿ ಕೈ ತುಂಬ ಹಣ ಪಡೆಯುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ವಿಚಾರಣೆ ವೇಳೆ ಬಂದಿತ ಆರೋಪಿಗಳು ನೀಡಿದ ಮಾಹಿತಿಯಂತೆ ಅವರಿಗೆ ಸಿಮ್‌ಗಳನ್ನು ಒದಗಿಸುತಿದ್ದ ಗುಜರಾತಿನ ಹೀರೇಂದ್ರನನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಅನೇಕ ಮಂದಿ ಶಾಮೀಲಾಗಿರುವ ಸಂಶಯಗಳಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.