ಡಿಕೆಶಿ ಪವರ್ ‘ಕಟ್’ ಗೆ ನಡೆಯುತ್ತಿದೆಯಾ.. ಮೆಗಾ ಪ್ಲ್ಯಾನ್..!, ಡಿಸೆಂಬರ್ 27ರ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ನಡೆಯುತ್ತಾ ಬಿಗ್ ಅನೌನ್ಸ್ ಮೆಂಟ್.?

ರಾಜ್ಯ

ಕೆ.ಪಿ.ಸಿ.ಸಿ ಅಧ್ಯಕ್ಷ ಪಟ್ಟದ ರೇಸ್ ನಲ್ಲಿ ಜಾರಕಿಹೊಳಿ, ಎಂ.ಬಿ. ಪಾಟೀಲ್, ಬಿ.ಕೆ. ಹರಿಪ್ರಸಾದ್!

ಕರ್ನಾಟಕ ಕಾಂಗ್ರೆಸ್ಸಿನ ಪವರ್ ಫುಲ್ ಲೀಡರ್ ಎಂದೇ ಕರೆಸಿಕೊಂಡಿಕೊಂಡಿರುವ ಕನಕಪುರದ ಬಂಡೆ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಬಿಗ್ ಶಾಕ್ ನೀಡುವ ತಯಾರಿಯಲ್ಲಿದೆ ಅನ್ನುವ ಮಾಹಿತಿ ಕೇಳಿಬರುತ್ತಿದೆ. ಡಿಕೆಶಿ ಅವರಿಗೆ ಸಿಎಂ ಬಿಡಿ, ಈಗಿರುವ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೂಡ ಕೈ ತಪ್ಪಿ ಹೋಗುತ್ತದೆ ಅನ್ನುವ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಅದಕ್ಕೆ ಮುಖ್ಯ ಕಾರಣ ಡಿಸೆಂಬರ್ 27 ರಂದು ದೆಹಲಿಯಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಡಿಕೆಶಿ ಅವರಿಗೆ ಆಹ್ವಾನವಿಲ್ಲ. ಅದರ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಮಂತ್ರಿ ಪರಮೇಶ್ವರ್, ಬಿ.ಕೆ ಹರಿಪ್ರಸಾದ್, ನಝೀರ್ ಅಹಮ್ಮದ್ ಅವರಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ. ಇದೀಗ ಇದೇ ಸುದ್ದಿ ರಾಜ್ಯ ಕಾಂಗ್ರೆಸ್ ನಲ್ಲಿ ಭಾರೀ ಬಿರುಗಾಳಿಯನ್ನು ಸೃಷ್ಟಿಸಿದೆ.

ನವೆಂಬರ್ ಕ್ರಾಂತಿ ಮೂಲಕ ಡಿಕೆಶಿ ಸಿಎಂ ಆಗುತ್ತಾರೆ. ಸಿದ್ದರಾಮಯ್ಯ ಪದಚ್ಯುತಿ ಆಗಬಹುದು ಅನ್ನುವ ಭಾರೀ ಸುದ್ದಿ ಹರಿದಾಡಿತ್ತು. ಕಾಂಗ್ರೆಸ್ ನೊಳಗಡೆಯ ಆಂತರಿಕ ಕದನ ರಾಷ್ಟ್ರ ಮಟ್ಟದಲ್ಲೂ ಚರ್ಚೆಯಾಗಿತ್ತು. ಬಣ ಬಡಿದಾಟ ಪಕ್ಷಕ್ಕೆ ಡ್ಯಾಮೇಜ್ ತರಬಹುದು ಅನ್ನುವ ಆತಂಕದಿಂದ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ -ಉಪಮುಖ್ಯಮಂತ್ರಿಗಳ ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್ ಮೂಲಕ ತೇಪೆ ಹಚ್ಚುವ ಪ್ರಯತ್ನ ಮಾಡಿತ್ತು. ಬಹಿರಂಗವಾಗಿ ನಡೆಯುತ್ತಿದ್ದ ಕುರ್ಚಿ ಕದನಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿತ್ತು.

ಆದರೆ ಮುಂದಿನ ಜನವರಿ, ಫೆಬ್ರವರಿ ತಿಂಗಳಲ್ಲಿ ಡಿಕೆಶಿ ಸಿಎಂ ಆಗುತ್ತಾರೆ ಅನ್ನುವ ಗುಸು ಗುಸುಗಳು ಹರಿದಾಡಿತ್ತು. ಆದರೆ ಬೆಳಗಾಂ ಚಳಿಗಾಲದ ಅಧಿವೇಶನದಲ್ಲಿ ಸಿದ್ದರಾಮಯ್ಯ ನಾನೇ ಪೂರ್ಣಾವಧಿ ಸಿಎಂ ಅನ್ನುವ ರೀತಿಯಲ್ಲಿ ಮೆಸೇಜ್ ಅನ್ನು ರವಾನಿಸಿದ್ದರು. ಮುಂದಿನ ಸಿಎಂ ಅಭ್ಯರ್ಥಿ ಡಿಕೆಶಿ ಸಾಫ್ಟ್ ಮೂಡಿಗೆ ತಲುಪಿದ್ದಾರೆ.

ಕಾಂಗ್ರೆಸಿನೊಳಗಡೆ ನಡೆಯುತ್ತಿರುವ ಆಂತರಿಕ ಕಚ್ಚಾಟದ ಲಾಭ ಪಡೆಯಲು ಬಿಜೆಪಿ ಕೂಡ ಪ್ರಯತ್ನಿಸಿತ್ತು. ಖುದ್ದು ಗೃಹಮಂತ್ರಿ ಅಮಿತ್ ಷಾ ಅವರು ಫೀಲ್ಡ್ ಗೆ ಇಳಿದು ಡಿಕೆಶಿ ಅವರನ್ನು ಸೆಳೆಯುವ ಪ್ರಯತ್ನ ಮಾಡಿತ್ತು. ಆದರೆ ಡಿಕೆಶಿ ಪರವಿರುವ ಶಾಸಕರ ಸಂಖ್ಯಾಬಲ ಕಡಿಮೆ ಇದ್ದ ಪರಿಣಾಮ ಪ್ರಯತ್ನ ಕೈಬಿಟ್ಟಿತ್ತು ಅನ್ನುವ ಮಾತುಗಳು ಹರಿದಾಡಿತ್ತು.

ಸದನದಲ್ಲಿ ಆರ್ ಎಸ್ ಎಸ್ ಗೀತೆ ವಾಚನ, ಡಿಕೆಶಿ ಅವರ ಇತ್ತೀಚಿನ ನಡೆ ನುಡಿಗಳಿಂದ ರಾಹುಲ್ ಗಾಂಧಿ ಕೂಡ ಡಿಕೆಶಿ ಅವರ ಬಗ್ಗೆ ಬೇಸರ ಹೊಂದಿದ್ದಾರೆ ಅನ್ನುವ ಮಾತುಗಳಿವೆ. ಡಿಕೆಶಿ ಅವರೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಅನ್ನುವ ಸುದ್ಧಿಗಳಿವೆ. ಡಿಸೆಂಬರ್ 27 ರಂದು ನಡೆಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಡಿಕೆಶಿ ಅವರನ್ನು ಬದಿಗೆ ಸರಿಸಿ ಅಹಿಂದ ನಾಯಕರಿಗೆ ಮಣೆ ಹಾಕಲಾಗಿದೆ.

ಇದೀಗ ಡಿಕೆಶಿ ಅವರು ಉಪಮುಖ್ಯಮಂತ್ರಿ ಆಗಿ ಮಾತ್ರ ಪವರ್ ಹೊಂದಲಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡಲಾಗುತ್ತಿದೆ ಅನ್ನುವ ಚರ್ಚೆಗಳು ಗರಿಗೆದರಿದೆ. ಒಬ್ಬರಿಗೆ ಒಂದೇ ಹುದ್ದೆ ಮಾನದಂಡದಲ್ಲಿ ಡಿಕೆಶಿ ಅವರ ಪವರ್ ಕಟ್ ಮಾಡುವ ಸಾಧ್ಯತೆ ಇದ್ದು, ಕೆಪಿಸಿಸಿ ಅಧ್ಯಕ್ಷ ಹುದ್ದೆ ಹೋದರೆ ಡಿಕೆಶಿ ಅವರು ಕೇವಲ ಮಂತ್ರಿಗಿರಿ ಯಷ್ಟೇ ಪವರ್ ಹೊಂದಲಿದ್ದು, ಕಾಂಗ್ರೆಸ್ ಹೈಕಮಾಂಡ್ ಡಿಕೆಶಿ ಅವರ ರೆಕ್ಕೆ ಪುಕ್ಕ ಕಟ್ ಮಾಡಿ ತೆರೆಗೆ ಸರಿಸುವ ಪ್ರಯತ್ನ ಮಾಡುವ ಎಲ್ಲಾ ಸಾಧ್ಯತೆಗಳು ಈಗ ದಟ್ಟವಾಗಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಈಗಾಗಲೇ ಸತೀಶ್ ಜಾರಕಿಹೊಳಿ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದು, ಎಂ.ಬಿ ಪಾಟೀಲ್, ಬಿಕೆ ಹರಿಪ್ರಸಾದ್ ಅವರ ಹೆಸರು ಕೂಡ ಗಣನೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಹೈಕಮಾಂಡ್ ಇದೆ. ಸಿದ್ದರಾಮಯ್ಯ ಅವರ ಕೈ ಮೇಲಾಗಲಿದ್ದು, ಡಿಕೆಶಿ ಅವರು ಪವರ್ ಲೆಸ್ ಆಗಲಿದ್ದಾರೆ ಅನ್ನುವ ಮಾಹಿತಿಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಒಟ್ಟಾರೆ ಮುಂದಿನ ನಿರ್ಧಾರಗಳು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.