ನಕಲಿ ದಾಖಲೆ ಸೃಷ್ಟಿಸಿ ಪಾಸ್ ಪೋರ್ಟ್; ವಿಟ್ಲ ಠಾಣಾ ಸಿಬ್ಬಂದಿ ಪ್ರದೀಪ್ ಬಂಧನ

ಕರಾವಳಿ

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ಶಕ್ತಿದಾಸ್ ಎಂಬ ಹೆಸರಿನ ವ್ಯಕ್ತಿಯು‌ 2025ನೇ ಫೆಬ್ರವರಿ ತಿಂಗಳಲ್ಲಿ ಪಾಸ್ ಪೊರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದು, ಸದ್ರಿ ಅರ್ಜಿಯ ಬಗ್ಗೆ ಪೊಲೀಸ್ ವೆರಿಫಿಕೇಶನ್ ಮಾಡುವ ವೇಳೆ ಅರ್ಜಿದಾರರ ವಿಳಾಸವು ದಾಖಲಾತಿಗಳಲ್ಲಿನ ವಿಳಾಸಕ್ಕೆ ತಾಳೆಯಾಗದೆ ಇರುವುದರಿಂದ ಪಾಸ್ ಪೋರ್ಟ್ ಶಿಪಾರಸ್ಸನ್ನು ನಿರಾಕರಿಸಲಾಗಿತ್ತು. ಪೊಲೀಸರು ಕ್ಲಿಯರೆನ್ಸ್ ನೀಡದ ಕಾರಣ ಶಕ್ತಿದಾಸ್ 2025ನೇ ಇಸವಿಯ ಜೂನ್‌ ತಿಂಗಳಲ್ಲಿ ಮರು ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಶಕ್ತಿದಾಸ್ ರವರ ಪಾಸ್ ಪೋರ್ಟಿನ ಮರು ಅರ್ಜಿ ವಿಟ್ಲ ಪೊಲೀಸ್ ಠಾಣೆಗೆ ವಿಚಾರಣೆಗೆ ಬಂದ ಸಂದರ್ಭದಲ್ಲಿ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿತ ಪ್ರದೀಪ್ ಎಂಬವರು, ಸದ್ರಿ ಅರ್ಜಿದಾರರ ವಿಳಾಸವಿರುವ ಬೀಟ್ ಸಿಬ್ಬಂದಿ ಸಾಬು ಮಿರ್ಜಿ ಎಂಬವರ ಗಮನಕ್ಕೆ ಬಾರದಂತೆ, ಬೀಟ್ ಸಿಬ್ಬಂದಿ ಸಾಬು ಮಿರ್ಜಿ ಎಂಬವರ ಹೆಸರಿನಲ್ಲಿ ನಕಲಿ ವರದಿ ತಯಾರಿಸಿ, ಬೀಟ್ ಸಿಬ್ಬಂದಿಯ ಸಹಿಯನ್ನು ಫೋರ್ಜರಿ ಮಾಡಿ, ಮೇಲಾಧಿಕಾರಿಯವರಿಂದ ಶಿಫಾರಸ್ಸು ಮಾಡಿಸಿ ಕಳುಹಿಸಿ ಕೊಟ್ಟಿರುತ್ತಾರೆ. ಹಾಗೂ ಪರಿಶೀಲನಾ ದಾಖಲೆಗಳನ್ನು ಯಾರಿಗೂ ಗೊತ್ತಾಗಬಾರದೆಂದು ನಾಶಪಡಿಸಿರುವುದಾಗಿದೆ.

ದಿನಾಂಕ:19-12-2025 ರಂದು ದಾಖಲೆಯನ್ನು ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ಕೇಂದ್ರ ಸರಕಾರದಿಂದ ನೀಡಲ್ಪಡುವ ಅತೀ ಪ್ರಮುಖ ಗುರುತಿನ ದಾಖಲೆಯಾದ ಪಾಸ್ ಪೋರ್ಟನ್ನು ಅಪರಾಧಿಕ ನಂಬಿಕೆ ದ್ರೋಹ ಬಗೆದು ಶಕ್ಕಿದಾಸ್ ಎಂಬವರಿಗೆ ಪಾಸ್‌ಪೋರ್ಟ್‌ ಹಾಗೂ ಪೊಲೀಸ್‌ ಕ್ಲೀಯರೆನ್ಸ್ ಸರ್ಟಿಫಿಕೇಟ್ ಸಿಗುವಂತೆ ಮಾಡಿ ಕಡತವನ್ನು ನಾಶಪಡಿಸಿದ ವಿಟ್ಲ ಠಾಣೆಯ ಪೊಲೀಸ್ ಸಿಬ್ಬಂದಿ ಪ್ರದೀಪ್ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ ಪಾಸ್ ಪೊರ್ಟ್ ಪಡೆದ ಶಕ್ತಿದಾಸ್ ಎಂಬವರ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 193/2025, ಕಲಂ: 336, 337, 316(5), 238 BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

ಆರೋಪಿತ ಪೊಲೀಸ್ ಸಿಬಂದಿ ಪ್ರದೀಪ್ ರವರನ್ನು ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.