ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ ಎಂದು ಬಾಂಬ್ ಸಿಡಿಸಿದ್ದ ದೇವೇಗೌಡರು 24 ಗಂಟೆಯೊಳಗೆ ಯು-ಟರ್ನ್

ರಾಜ್ಯ

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ ಎಂದು ಬಾಂಬ್ ಸಿಡಿಸಿದ್ದ ಜೆಡಿಎಸ್ ವರಿಷ್ಠ ದೇವೇಗೌಡರು 24 ಗಂಟೆಯೊಳಗೆ ತಮ್ಮ ಹೇಳಿಕೆಯಿಂದ ಯು-ಟರ್ನ್ ಹೊಡೆದು ಅಚ್ಚರಿ ಮೂಡಿಸಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಯಾವುದೇ ಪಕ್ಷದ ಹಂಗಿಲ್ಲದೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ ದೊಡ್ಡ ಗೌಡರ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಲೋಕಸಭೆ ಚುನಾವಣೆಯ ಬಳಿಕ ಮೈತ್ರಿ ಮುಂದುವರಿಯುವುದಿಲ್ಲವೇ ಎಂಬ ಅನುಮಾನಗಳನ್ನು ಇದು ಹುಟ್ಟುಹಾಕಿತ್ತು. ಜೆಡಿಎಸ್ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕರಲ್ಲಿಯೂ ಈ ಹೇಳಿಕೆ ಗೊಂದಲ ಸೃಷ್ಟಿಸಿತ್ತು.

ಆದರೆ ದಿಡೀರಾಗಿ ತಮ್ಮ ನಿಲುವನ್ನು ಸಂಪೂರ್ಣವಾಗಿ ಬದಲಿಸಿರುವ ದೇವೇಗೌಡರು, ಮೈತ್ರಿ ವಿಚಾರದಲ್ಲಿ ಮೃದು ಧೋರಣೆ ತಾಳಿದ್ದಾರೆ. ತಮ್ಮ ಹಳೆಯ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸೀಟು ಹಂಚಿಕೆ ಅಥವಾ ಮೈತ್ರಿ ಕುರಿತು ನಾನು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಲು ಸಾಧ್ಯವಿಲ್ಲ. ಇದು ರಾಜ್ಯಮಟ್ಟದ ವಿಚಾರವಾಗಿದೆ. ಮೈತ್ರಿ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕುಳಿತು ಚರ್ಚೆ ನಡೆಸಬೇಕು. ಸ್ಥಳೀಯ ನಾಯಕರು ಮಾತುಕತೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ನನ್ನದೇನು ತಕರಾರಿಲ್ಲ ಎಂದು ಹೇಳುವ ಮೂಲಕ ಮೈತ್ರಿಗೆ ಹಸಿರು ನಿಶಾನೆ ತೋರಿದ್ದಾರೆ.

ಕೆಲವು ದಿನಗಳ ಅಂತರದಲ್ಲಿ ಉಲ್ಟಾ ಹೊಡೆಯುವ ಮೂಲಕ ದೇವೇಗೌಡರು ಮೈತ್ರಿ ಮುರಿದುಬೀಳಲಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಬಿಜೆಪಿ ಜೊತೆಗಿನ ದೋಸ್ತಿ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.