ಅಂಬಲಪಾಡಿ ನಾಟಕೋತ್ಸವ ಸಮಾರೋಪ, ರಂಗಸನ್ಮಾನ ನಾಟಕಗಳಿoದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸಾಧ್ಯ : ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್

ಕರಾವಳಿ

ಉಡುಪಿ : ರಂಗಭೂಮಿಗೆ ತನ್ನದೇ ಆದ ಇತಿಹಾಸವಿದೆ. ಸಮಾಜದ ವಿವಿಧ ಮುಖಗಳ ಅನಾವರಣೆ, ಸಾಮಾಜಿಕ ಪಿಡುಗುಗಳ ಬಗ್ಗೆ ನಾಟಕಗಳು ಬೆಳಕು ಚೆಲ್ಲಿ ಸಮಸ್ಯೆಗಳ ಪರಿಹಾರಕ್ಕೂ ಕಾರಣವಾಗಿವೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದರು.

ಅವರು ಗುರುವಾರ ರಂಗಭೂಮಿ ಉಡುಪಿ ವತಿಯಿಂದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ದಿ.ನಿ.ಬೀ.ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಂಡ ಎರಡು ದಿನಗಳ ‘ಅಂಬಲಪಾಡಿ ನಾಟಕೋತ್ಸವ ‘ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನನ್ನ ತಂದೆ ಅಣ್ಣಾಜಿ ಬಲ್ಲಾಳರು ದೇವಳದ ಧರ್ಮದರ್ಶಿಗಳಾಗಿದ್ದ ಸಂದರ್ಭದಲ್ಲಿ ದೇವಳದ ಧಾರ್ಮಿಕ ಚಟುವಟಿಕೆಗಳ ಜೊತೆಗೆ ಯಕ್ಷಗಾನ, ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅದು ಅವರ ಆಸಕ್ತಿಯ ವಿಷಯವಾಗಿತ್ತು. ದೇವಳ ಎಂದರೆ ಬರೀ ಪೂಜೆ, ಪುನಸ್ಕಾರಗಳಿಗಲ್ಲ, ಅಂಗ ಮತ್ತು ರಂಗಕ್ಕೂ ಅಲ್ಲಿ ಅವಕಾಶವಿದೆ. ಅಂಗ ದೇವರ ಪೂಜೆ, ಅಲಂಕಾರ ಮೊದಲಾದವುಗಳಿಗೆ ಸಂಬoಧಿಸಿದ್ದಾದರೆ, ರಂಗ ಭರತನಾಟ್ಯ, ನಾಟಕ, ಪ್ರವಚನ ಇತ್ಯಾದಿಗಳನ್ನು ನಡೆಸುವುದಾಗಿದೆ. ಇದಕ್ಕೆ ಪೂರಕವಾದ ವಾತಾವರಣ ಅಣ್ಣಾಜಿ ಬಲ್ಲಾಳರ ಕಾಲದಲ್ಲಿಯೂ ಇತ್ತು. ಒಂದು ಕಾಲದಲ್ಲಿ ರಾಜಾಶ್ರಯದಲ್ಲಿ ಮೆರೆದ ಈ ಕಲೆಗೆ ಸಂಘಸoಸ್ಥೆ, ಸರಕಾರಗಳು ಪ್ರೋತ್ಸಾಹ ನೀಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಮಕ್ಕಳಿಗೆ ನಾಟಕ ಕಲಿಸಬೇಕು. ರಂಗಭೂಮಿಯ ಪರಿಚಯ ಮಾಡಿಕೊಡಬೇಕು. ಅವರಲ್ಲಿ ಸುಪ್ತವಾಗಿ ಅಡಗಿರುವ ರಂಗಪ್ರತಿಭೆಯನ್ನು ಹೊರತರಬೇಕು. ಈ ಮೂಲಕ ಭವಿಷ್ಯದ ನಟರನ್ನು ಸೃಷ್ಟಿ ಮಾಡಬೇಕು ಎನ್ನುವ ರಂಗಭೂಮಿ ಸಂಸ್ಥೆಯ ತುಡಿತ ಶ್ಲಾಘನೀಯ. ಡಾ.ತಲ್ಲೂರು ಅವರಂತಹ ಕಲಾ ಪ್ರೋತ್ಸಾಹಕರ ಸಾರಥ್ಯದಲ್ಲಿ ಈ ಕಾರ್ಯ ನಡೆಯುತ್ತಿರುವುದು ಸಂತೋಷ ತಂದಿದೆ ಎಂದು ಅವರು ಅಭಿನಂದಿಸಿದರು.

ಮಕ್ಕಳು ಮುಂದೆ ಬರಬೇಕು. ಮಾನಸಿಕ, ದೈಹಿಕವಾಗಿ ಬೆಳೆಯಬೇಕಾದರೆ ಅವರಿಗೆ ಸಂಸ್ಕಾರ ತುಂಬಬೇಕು. ಅದನ್ನು ರಂಗಭೂಮಿ ಕೊಡಬಲ್ಲದು. ರಂಗಭೂಮಿ ಉಡುಪಿ 60 ವರ್ಷಗಳನ್ನು ಪೂರೈಸಿದ ಪ್ರಬುದ್ಧ ಸಂಸ್ಥೆ. ಬಾಲ್ಯದಿಂದಲೇ ಇದರ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇವೆ. ಯುವ ಜನಾಂಗವನ್ನು ರಂಗಭೂಮಿಯತ್ತ ಸೆಳೆದರೆ ಉತ್ತಮ ಸಮಾಜದ ನಿರ್ಮಣದ ಸಾಧ್ಯವಿದೆ. ಎಷ್ಟೋ ಸಾಮಾಜಿಕ ಸಮಸ್ಯೆಗಳಿಗೆ ನಾಟಕ ಪರಿಹಾರ ಕೊಡಬಲ್ಲದು. ಮಕ್ಕಳಿಗೆ ನಾಟಕ, ಯಕ್ಷಗಾನವನ್ನು ತೋರಿಸಿಯಾದರೂ ಸಂಸ್ಕಾರ ಕೊಡಬೇಕು. ಇದರಿಂದ ಮುಂದಿನ ಭವಿಷ್ಯ ಭದ್ರವಾಗುತ್ತದೆ ಎಂದು ಅವರು ಹೇಳಿದರು.

ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಕಳೆದ 15 ವರ್ಷಗಳಿಂದ ಅಂಬಲಪಾಡಿ ದೇವಳ, ಧರ್ಮದರ್ಶಿ ಅಣ್ಣಾಜಿ ಬಲ್ಲಾಳರಿಂದ ಹಿಡಿದು ಈಗಿನ ಡಾ.ವಿಜಯ ಬಲ್ಲಾಳ ಅವರತನಕ ರಂಗಭೂಮಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅವರ ಉತ್ತೇಜನದಿಂದಲೇ ನೀನಾಸಂ ತಿರುಗಾಟದ ಈ ನಾಟಕೋತ್ಸವವನ್ನು ಹಮ್ಮಿಕೊಂಡಿದ್ದೇವೆ. ನಾಟಕಗಳು ಸಮಾಜದ ಜ್ವಲಂತ ಸಮಸ್ಯೆಗಳನ್ನು ನಮ್ಮ ಮುಂದೆ ತೆರೆದಿತ್ತವೆ. ಈ ನಾಟಕಗಳನ್ನು ನೋಡಿಯಾದರೂ ನಮ್ಮೊಳಗೆ ಪರಿವರ್ತನೆ ಬರಬೇಕು. ಇಂತಹ ಉತ್ತಮ ಸಂದೇಶಗಳನ್ನು ರಂಗಭೂಮಿ ಸಮಾಜಕ್ಕೆ ಕೊಡಬೇಕು ಎಂದರು.

ಈ ಸಂದರ್ಭದಲ್ಲಿ ನಾಟಕಕಾರ ರವಿಕುಮಾರ್ ಕಡೆಕಾರ್ ಅವರಿಗೆ ರಂಗಸನ್ಮಾನ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ರಂಗಭೂಮಿಯ ಉಪಾಧ್ಯಕ್ಷ ಆರ್.ಎನ್.ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು ಸ್ವಾಗತಿಸಿ, ವಿವೇಕಾನಂದ ಎನ್. ಕಾರ್ಯಕ್ರಮ ನಿರೂಪಿಸಿದರು. ರವಿರಾಜ್ ನಾಯಕ್ ವಂದಿಸಿದರು.