ಮಂಗಳೂರು ಉತ್ತರದಲ್ಲಿ ಹೊಸ ಚರಿಷ್ಮಾ ಸೃಷ್ಟಿಸುತ್ತಿರುವ ಇನಾಯತ್ ಆಲಿ

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ನಾಯಕರಾಗುವತ್ತ ಇನಾಯತ್ ಆಲಿ ದಾಪುಗಾಲು ಇಡುತ್ತಿದ್ದಾರೆ. ಪಕ್ಷ ಸಂಘಟನೆಯಲ್ಲಿ ಅವರು ತೋರುತ್ತಿರುವ ಉತ್ಸಾಹಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದ ನಾಯಕರು ಫಿದಾ ಆಗುತ್ತಿದ್ದಾರೆ. ಅದ್ದೂರಿ ಕಾರ್ಯಕ್ರಮದ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸುತ್ತಿದ್ದಾರೆ. ಅವರ ಸಂಘಟನಾ ಚಾತುರ್ಯತೆಗೆ ಭೇಷ್ ಅನ್ನಲೇಬೇಕು.

ಕಳೆದ ಚುನಾವಣೆಯಲ್ಲಿ ಕೊನೆ ಹಂತದಲ್ಲಿ ಪಕ್ಷ ಟಿಕೆಟ್ ನೀಡಿದ ಕಾರಣ ಸೋಲು ಅನುಭವಿಸಿದ್ದರು. ಸೋಲೇ ಗೆಲುವಿನ ಮೆಟ್ಟಿಲು ಅಂದುಕೊಂಡು ಸುಮ್ಮನೆ ಕೂರದೆ ಕಾಲಿಗೆ ಚಕ್ರ ಕಟ್ಟಿಕೊಂಡ ರೀತಿಯಲ್ಲಿ ಕ್ಷೇತ್ರಾದ್ಯಂತ ಸುತ್ತುತ್ತಿದ್ದಾರೆ. ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕ್ರಮ ನಡೆಸಲು ನಾಯಕರು ಹೆಣಗಾಡುತ್ತಿದ್ದರೂ ಮಂಗಳೂರು ಉತ್ತರದಲ್ಲಿ ವಿಜೃಂಭಣೆಯ ಕಾರ್ಯಕ್ರಮದ ಮೂಲಕ ಜಿಲ್ಲೆಯಾದ್ಯಂತ ಚರಿಷ್ಮಾ ಸೃಷ್ಟಿಸುತ್ತಿದ್ದಾರೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಎರಡು ಬ್ಲಾಕ್ ಮಟ್ಟದಲ್ಲಿ ಹೊಸ ಕಾಂಗ್ರೆಸ್ ಕಚೇರಿ ತೆರೆದು ಪಕ್ಷ ಮತ್ತೆ ಫೀನಿಕ್ಸ್ ನಂತೆ ಎದ್ದೇಳಲು ಶ್ರಮ ಹಾಕುತ್ತಿದ್ದಾರೆ.

ಇನಾಯತ್ ಅಲಿ ಎನ್‍ಎಸ್‍ಯುಐ ವಿದ್ಯಾರ್ಥಿ ಸಂಘಟನೆ ಮೂಲಕ ರಾಜಕಾರಣಕ್ಕೆ ಧುಮುಕಿದವರು. ಇವರು ಆಸ್ಕರ್ ಫೆರ್ನಾಂಡಿಸ್ ಗರಡಿಯಲ್ಲೇ ಬೆಳೆದು ಬಂದವರು. ಯಶಸ್ವಿ ಉದ್ಯಮಿ ಯಾಗಿ ನೇರ ರಾಜಕಾರಣಕ್ಕೆ ಇಳಿಯದೆ ತೆರೆಮರೆಯಲ್ಲಿಯೇ ಬಹಳ ವರ್ಷಗಳ ಕಾಲ ಕೆಲಸ ಮಾಡಿ ಕೊಂಡು ಬಂದವರು. ಮಂಗಳೂರು ಉತ್ತರದಲ್ಲಿ ಕಳೆದ ಬಾರಿ ಸೋತರೂ ಎದೆಗುಂದಲಿಲ್ಲ. ಸರಕಾರದ ಮಟ್ಟದಲ್ಲಿ ವಿಶೇಷ ಪ್ರಭಾವ ಬೀರಿ ಕೋಟಿ ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಉತ್ತರದಲ್ಲಿ ಅಲ್ಪಸಂಖ್ಯಾತ ಕಾಲೋನಿಗೆ ವಿಶೇಷ ಅನುದಾನ ತರುವ ಮೂಲಕ ಗಲ್ಲಿ ಗಲ್ಲಿಗಳಲ್ಲಿ ರಸ್ತೆ ನಿರ್ಮಾಣ ಆಗುತ್ತಿದೆ. ಮುಜುರಾಯಿ ಇಲಾಖೆಯ ದೇವಸ್ಥಾನದ ಅಭಿವೃದ್ಧಿಗೆ ಅನೇಕ ಅನುದಾನಗಳನ್ನು ತರುತ್ತಿದ್ದಾರೆ. ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಾಲು ಸಾಲು ಕಾಮಗಾರಿಗಳು ಭರದಿಂದ ಸಾಗುತ್ತಿದ್ದರೂ ಇದರ ಹಿಂದಿನ ರೂವಾರಿ ಇನಾಯತ್ ಆಲಿ ಅನ್ನುವುದು ನೂರಕ್ಕೆ ನೂರು ಸತ್ಯ. ಅವರು ಶಾಸಕರಲ್ಲದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಪ್ರಭಾವ ಬಳಸಿ ಅನುದಾನಗಳನ್ನು ತರುತ್ತಿದ್ದಾರೆ.

ಇಲ್ಲಿಯ ದೇವಸ್ಥಾನ, ಮಸೀದಿ, ಚರ್ಚ್ ಅಭಿವೃದ್ಧಿಗಾಗಿ ಸರ್ಕಾರದಿಂದ ಗರಿಷ್ಠ ಮಟ್ಟದ ಅನುದಾನವನ್ನು ತರಲು ಯಶಸ್ವಿಯಾಗಿದ್ದಾರೆ. ಬಡರೋಗಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಗಳಿಗೆ, ಸರಕಾರದ ವಿವಿಧ ಸೌಲಭ್ಯಗಳನ್ನು ಜನರ ಕೈಗೆ ಮುಟ್ಟಲು ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಸದಾ ಜನರ ನಡುವೆಯೇ ಬೆರೆಯುವ ಮೂಲಕ ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದಾರೆ.

ಪಾದರಸದಂತಹ ಚುರುಕಿನ ಓಡಾಟ, ಜನಸಾಮಾನ್ಯರ ಕಷ್ಟಕ್ಕೆ ಮಿಡಿಯುವ ಅವರ ಜೀವನ ಶೈಲಿ ಎಂತಹವರನ್ನೂ ಮೂಕವಿಸ್ಮಿತಗೊಳಿಸ ಬಹುದು. ರಾಜಕಾರಣಿಗಳು ಹೀಗೂ ಇರುತ್ತಾರಾ ಅನ್ನುವುದಕ್ಕೆ ಇನಾಯತ್ ಆಲಿ ಉತ್ತಮ ಉದಾಹರಣೆ. ಒಂದು ವೇಳೆ ಶಾಸಕರಾಗಿದ್ದರೆ,ಜಿಲ್ಲೆಗೆ ಅಭೂತಪೂರ್ವ ಯೋಜನೆ ಗಳನ್ನು ತರುತ್ತಿದ್ದರು ಅನ್ನುವುದು ನೂರಕ್ಕೆ ನೂರು ಸತ್ಯ. ಸರ್ವಧರ್ಮೀಯರ ಪಾಲಿನ ನಾಯಕರಾಗಿ ಮಿಂಚುತ್ತಿದ್ದಾರೆ.

ಇನಾಯತ್ ಆಲಿ ಅಗರ್ಭ ಶ್ರೀಮಂತರು. ತನ್ನ ವಿನಯಶೀಲತೆಯ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾದವರು. ರಾಜಕಾರಣಕ್ಕೆ ಧುಮುಕುವ ಮೊದಲೇ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದರು. ಈಗಲೂ ಕ್ಷೇತ್ರಾದ್ಯಂತ ಜಾತಿ ಮತ ಭೇದವಿಲ್ಲದೆ ಅಶಕ್ತರಿಗೆ ನೆರವಾಗುತ್ತಿದ್ದಾರೆ. ಬಡವರ ವಿವಾಹ ಕಾರ್ಯಕ್ಕೆ ತಮ್ಮ ಸಂಪತ್ತಿನ ಒಂದಂಶವನ್ನು ಸಮಾಜಕ್ಕೆ ಮೀಸಲಿಡುತ್ತಿದ್ದಾರೆ.

ಕರಾವಳಿ ಭಾಗದಿಂದ ಹಜ್ ಯಾತ್ರೆ ಕೈಗೊಳ್ಳುವವರ ಅನುಕೂಲಕ್ಕಾಗಿ ನಿರ್ಮಿಸಲಿರುವ ಹಜ್ ಭವನಕ್ಕೆ ಸುಮಾರು 8 ಕೋಟಿ ರೂಪಾಯಿ ಮೊತ್ತದ 1.80 ಎಕರೆ ಜಮೀನನ್ನು ಉದ್ಯಮಿ ಇನಾಯತ್ ಅಲಿ ದಾನವಾಗಿ ನೀಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬಜಪೆಯಂತಹ ಸಿಟಿಯಲ್ಲಿ ಕೋಟ್ಯಂತರ ಬೆಲೆಬಾಳುವ ಜಮೀನನ್ನು ದಾನ ನೀಡುವ ಮೂಲಕ ಸಹೃದಯತೆ ಮೆರೆದಿದ್ದಾರೆ. ಆದರೆ ಇದು ಯಾವುದೇ ಪ್ರಚಾರಕ್ಕೆ ಕೊಟ್ಟದ್ದಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಶ್ರೀಮಂತರಿದ್ದರೂ, ಹೃದಯ ವೈಶಾಲ್ಯತೆ ಹೊಂದಿರುವ ಶ್ರೀಮಂತರು ಕೆಲವೇ ಕೆಲವು ಮಂದಿ. ಅವರಲ್ಲಿ ಇನಾಯತ್ ಆಲಿ ಕೂಡ ಒಬ್ಬರು. ಸಮಾಜದ ತುಡಿತಕ್ಕೆ ಧ್ವನಿಯಾಗುವ, ಸರ್ವಧರ್ಮೀಯರ ಪ್ರೀತಿಯ ನಾಯಕ ಇನಾಯತ್ ಆಲಿ ಶಾಸಕರಾಗಲಿ. ಆ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲಿ.