ವೈಭವದ ಕರಾವಳಿ ಉತ್ಸವ, ಕಂಬಳದ ಅಬ್ಬರದಲ್ಲಿ ಬಡವರು, ದುರ್ಬಲ ಸಮುದಾಯಗಳ ಸಂಕಷ್ಟಗಳನ್ನು ಜಿಲ್ಲಾಡಳಿತ ಕಡೆಗಣಿಸಿದೆ: ಮುನೀರ್ ಕಾಟಿಪಳ್ಳ

ಕರಾವಳಿ

ಮನೆ, ನಿವೇಶನ ಹಸ್ತಾಂತರಿಸಲು ಆಗ್ರಹಿಸಿ ಫಲಾನುಭವಿ ಕೊರಗ ಕುಟುಂಬಗಳಿಂದ 12 ತಾಸುಗಳ ಧರಣಿ

ಕುಡುಪು‌ ಗ್ರಾಮದ ಮಂಗಳಜ್ಯೋತಿಯಲ್ಲಿ‌ ಕೊರಗ ಕುಟುಂಬಗಳಿಗೆ 2018 ರಲ್ಲಿ ನಗರ ಪಾಲಿಕೆ ಮಂಜೂರಾಗಿರುವ ಮನೆ ನಿವೇಶನ ಹಸ್ತಾಂತರಿಸದೆ ಸತಾಯಿಸುತ್ತಿರುವ ಮಂಗಳೂರು ನಗರಪಾಲಿಕೆ ಹಾಗು ಜಿಲ್ಲಾಡಳಿತದ ಅಮಾನವೀಯ ಧೋರಣೆಯನ್ನು ಖಂಡಿಸಿ, ತಕ್ಷಣವೆ ನಿವೇಶನ ಸ್ವಾಧೀನ ನೀಡುವಂತೆ ಆಗ್ರಹಿಸಿ ಫಲಾನುಭವಿ ಕುಟುಂಬಗಳು, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಮಂಗಳೂರು ನಗರ ಪಾಲಿಕೆ ಕಚೇರಿ ಮುಂಭಾಗ 12 ತಾಸುಗಳ ಧರಣಿ ಸತ್ಯಾಗ್ರಹ ನಡೆಸಿದರು.

ಧರಣಿಯನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಉದ್ಘಾಟಿಸಿದರು. ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಸ್ಪೀಕರ್ ಸಾಹೇಬರು ವೈಭವದ ಕರಾವಳಿ ಉತ್ಸವ, ಕಂಬಳಗಳ ಅಬ್ಬರದಲ್ಲಿ ಕಳೆದು ಹೋಗಿದ್ದಾರೆ. ಅವರಿಗೆ ಇಲ್ಲಿನ ಬಡವರು, ದುರ್ಬಲ ಸಮುದಾಯಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ಕಾಳಜಿ ಇಲ್ಲ. ಅಳಿವಿನಂಚಿನಲ್ಲಿ‌ ಇರುವ ಕೊರಗ ಸಮುದಾಯದ ಕುರಿತು ಜಿಲ್ಲಾಡಳಿತದ ಸಭೆಗಳಲ್ಲಿ ಬಾಯಿಪ್ರಚಾರಕ್ಕೆ ಉತ್ಸಾಹದಿಂದ ಮಾತಾಡುವ ಇವರು, ಆ ತರುವಾಯ ಕೊರಗ ಸಮುದಾಯವನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ವಾಮಂಜೂರು ಮಂಗಳಜ್ಯೋತಿಯ 33 ಕೊರಗ ಕುಟುಂಬಗಳಿಗೆ ಮೀಸಲು ಮನೆ ನಿವೇಶನ ಹಸ್ತಾಂತರಿಸಲು ದೀರ್ಘಕಾಲದಿಂದ ಸತಾಯಿಸುತ್ತಿರುವುದು ಇದಕ್ಕೊಂದು ಉದಾಹರಣೆ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳಜ್ಯೋತಿಯ ಕೊರಗ ಕುಟುಂಬಗಳು ಕಳೆದ ಐದು ವರ್ಷಗಳಿಂದ ಹತ್ತಾರು ಬಾರಿ ಮಂಗಳೂರು ನಗರ ಪಾಲಿಕೆ ಮುಂಭಾಗ ಪ್ರತಿಭಟನೆ, ಧರಣಿ ನಡೆಸಿದರೂ ಮಂಜೂರು ಗೊಂಡಿರುವ ಮೀಸಲಿಟ್ಟಿರುವ ಮನೆ ನಿವೇಶನ ಹಸ್ತಾಂತರಿಸದೆ ಸತಾಯಿಸಲಾಗುತ್ತಿದೆ. ‘ಕೊರಗ ಸಮುದಾಯದ ಮನೆ ಬಾಗಿಲಿಗೆ ಸರಕಾರವೇ ತೆರಳಲಿದೆ, ಅಧಿಕಾರಿಗಳು ಅವರ ಮನೆ ಬಾಗಿಲಿಗೆ ತೆರಳಿ ಸವಲತ್ತುಗಳನ್ನು ಒದಗಿಸಿಕೊಡಲಿದ್ದಾರೆ’ ಎಂದು ಘೋಷಿಸಿಕೊಳ್ಳುವ ಸರಕಾರ ಹಾಗೂ ಜನಪ್ರತಿನಿಧಿಗಳು ಕನಿಷ್ಟ ಪ್ರಾಮಾಣಿಕತೆ ಇದ್ದರೆ ತಕ್ಷಣವೆ ಮನೆ, ನಿವೇಶನ ಹಸ್ತಾಂತರಿಸಲಿ, ಇಲ್ಲದಿದ್ದಲ್ಲಿ ಇವರ ಸುಳ್ಳಿನ ಮುಖವಾಡಗಳನ್ನು ಕಳಚಿ ಹಾಕಲಾಗುವುದು ಎಂದು ಎಚ್ಚರಿಸಿದರು.

ಸಮಿತಿಯ ಜಿಲ್ಲಾ ಮಾರ್ಗದರ್ಶಕರಾದ
ಯೋಗೀಶ್ ಜಪ್ಪಿನಮೊಗರು
ಮಾತನಾಡುತ್ತಾ ಉಡುಪಿ ಮತ್ತು ದಕ್ಷಿಣ ಕನ್ನಡ ಎರಡು ಜಿಲ್ಲೆಗಳ ಶಾಸಕರು ಮತ್ತು ಸಂಸದರುಗಳು ಲೋಕಸಭೆ ಮತ್ತು ಶಾಸನ ಸಭೆಗಳಲ್ಲಿ ಮೊಹಮ್ಮದ್ ಫೀರ್ ವರದಿಯಂತೆ ಇಲ್ಲಿನ ಆದಿವಾಸಿ ಕೊರಗ ಸಮುದಾಯದ ಬಂದುಗಳಿಗೆ ಅವರ ಸಂವಿಧಾನ ಬದ್ಧ ಹಕ್ಕುಗಳನ್ನು ನೀಡಬೇಕು ಎಂಬಂತೆ ಬೊಗಳೆ ಮಾತುಗಳನ್ನು ಆಡುತ್ತಾರೆ. ಆದರೆ ಪ್ರಾಯೋಗಿಕವಾಗಿ ಗಮನಿಸುವಾಗ ಕೊರಗ ಸಮುದಾಯದ ಕುರಿತಾಗಿ ಎರಡು ಉಭಯ ಜಿಲ್ಲೆಗಳ ಆಡಳಿತಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಕನಿಷ್ಠ ಮಾನವೀಯ ಸಂವೇದನೆಯು ಕೂಡ ಇಲ್ಲ ಎಂಬುದನ್ನು ನಾವು ಗಮನಿಸಬೇಕು. ಈ ದೇಶದ ಪ್ರಧಾನಿ ಮತ್ತು ಈ ರಾಜ್ಯದ ಮುಖ್ಯಮಂತ್ರಿಗಳು ಆದಿವಾಸಿ ಸಮುದಾಯದ ಜೊತೆಗೆ ನಾವು ಇದ್ದೇವೆ ಎಂಬಂತೆ ಹಾರಿಕೆಯ ಮಾತಿನಲ್ಲಿ ಹೇಳಿ ಅವರ ಹಕ್ಕುಗಳನ್ನು ಮೊಟಕುಗೊಳಿಸುತ್ತಿದ್ದಾರೆ. ಮಹಮದ್ ಪೀರ್ ವರದಿಯಂತೆ ಕೊರಗ ಸಮುದಾಯದ ಏಳಿಗೆಗಾಗಿ ಸರಕಾರ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಘಟಕದ ಅಧ್ಯಕ್ಷರಾದ ಕರಿಯ ಕೆ. ಮಾತನಾಡುತ್ತಾ ಕಳೆದ ಎಂಟು ವರ್ಷಗಳಿಂದ ನಾವು ನಮ್ಮ ನಿವೇಶನದ ಹಕ್ಕುಗಳಿಗಾಗಿ ನಿರಂತರ ಹೋರಾಟಗಳನ್ನು ನಡೆಸಿದ್ದೇವೆ. ಜನಪ್ರತಿನಿಧಿಗಳ ಬಳಿಯಲ್ಲಿ ನಮ್ಮ ನೋವುಗಳನ್ನು ತೋಡಿಕೊಂಡಿದ್ದೇವೆ. ಆದರೆ ನಮ್ಮ ಮಾತಿಗೆ ಕಿವಿ ಕೊಡುವ ಯಾವುದೇ ಜನಪ್ರತಿನಿಧಿಗಳ ಕಿವಿಗಳು ಈ ಜಿಲ್ಲೆಯಲ್ಲಿ ಉಳಿದಿಲ್ಲ ಎಂದರು.

ಕಾರ್ಮಿಕ ಮುಖಂಡರಾದ ವಸಂತ ಆಚಾರಿ, ಹಿರಿಯರಾದ ಜೆ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾ ಕಾರ್ಯದರ್ಶಿ ಸದಾಶಿವ ದಾಸ್ ಸುನಿಲ್ ಕುಮಾರ್ ಬಜಾಲ್, ಯುವಜನ ಮುಖಂಡರಾದ ಜಗದೀಶ್ ಬಜಾಲ್, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಶೇಖರ್ ವಾಮನ್ಜೂರು, ಕೃಷ್ಣ ಇನ್ನಾ ಧರಣಿ ಯನ್ನು ಉದ್ದೇಶಿಸಿ ಮಾತನಾಡಿದರು.
ಧರಣಿಯ ನೇತೃತ್ವವನ್ನು ಮಂಗಳ ಜ್ಯೋತಿ ಘಟಕದ ಮುಖಂಡರಾದ ವಿಕಾಸ್ ವಾಮಂಜೂರು, ಕಿರಣ್ ಸಂತೋಷ್ನಗರ, ಮಹಿಳಾ ಘಟಕದ ಮುಖಂಡರಾದ ಮಂಜುಳಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜನವಾದಿ ಮಹಿಳಾ ಸಂಘಟನೆಯ ಮುಖಂಢರಾದ ಪ್ರಮೀಳಾ ಶಕ್ತಿನಗರ, ಅಶುಂತಾ ಡಿಸೋಜಾ, ಜಯಂತಿ ಬಿ ಶೆಟ್ಟಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಾರ್ಗದರ್ಶಕರಾದ ಶ್ರೀನಾಥ್ ಕಾಟಿಪಳ್ಳ ಉಪಸ್ಥಿತರಿದ್ದರು. ಪ್ರತಿಭಟನೆಯ ನೇತೃತ್ವವನ್ನು ಕಿರಣ್ ಕತ್ತಲ್ ಸಾರ್, ವಿಕಾಸ್ ವಾಮಜೂರು, ಅಶ್ವಿತ ಜ್ಯೋತಿ, ವಿಜ್ಞೇಶ್ ವಾಮಾಂಜೂರು, ತುಳಸಿ ಬೆಳ್ಮಣ್ಣು, ಪೂರ್ಣೇಶ್, ದಿನೇಶ್ ಗಣೇಶ್ ಮೊದಲಾದವರು ವಹಿಸಿದ್ದರು.