ಒಂದು ಕಾರು ಮತ್ತು ಒಂದು ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ದಿನಾಂಕ: 19-01-2026 ರಂದು ಸಂಜೆ, ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ, ಕಾರು ಹಾಗೂ ಗೂಡ್ಸ್ ವಾಹವನ್ನು ತಪಾಸಣೆಗಾಗಿ ತಡೆದು ನಿಲ್ಲಿಸಿ, ಕಾರಿನ ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಚಾರ್ಮಾಡಿ ಗ್ರಾಮದ ನಿವಾಸಿ ರಫೀಕ್ ಎಂಬುದಾಗಿ ತಿಳಿದು ಬಂದಿದ್ದು, ಸಂಶಯಗೊಂಡು ಕಾರನ್ನು ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಕವರ್ ನಲ್ಲಿ ಸುಮಾರು 100 ಗ್ರಾಂ ತೂಕವಿರುವ ಗಾಂಜಾ ಗಿಡದ ಎಲೆಗಳಂತೆ ಇದ್ದ ಸೊಪ್ಪು, ಹೂ, ಕಾಯಿ ತುಂಬಿಸಿ ಇದ್ದ ಕಟ್ಟು ಪತ್ತೆಯಾಗಿರುತ್ತದೆ.
ಆ ಬಳಿಕ ಗೂಡ್ಸ್ ವಾಹನದ ಚಾಲಕನ ಬಳಿ ವಿಚಾರಣೆ ಒಳಪಡಿಸಿದಾಗ ಆತನೂ ಚಾರ್ಮಾಡಿ ಗ್ರಾಮದ ನಿವಾಸಿ ಅಬ್ದುಲ್ ಸಾದಿಕ್ (37) ಎಂಬುದಾಗಿ ತಿಳಿಸಿದ್ದು, ಆತನ ವಾಹನ ಪರಿಶೀಲಿಸಿದಾಗ ಸದ್ರಿ ವಾಹನದಲ್ಲಿ 106 ಕಿಲೋ ಗ್ರಾಂ ಮತ್ತು 60 ಗ್ರಾಂ ತೂಕದ ಒಟ್ಟು 73 ಕಟ್ಟು ಗಾಂಜಾ ಪತ್ತೆಯಾಗಿರುತ್ತದೆ. ಇದರ ಮೌಲ್ಯ ರೂ. 53,03,000 ಎಂದು ಅಂದಾಜಿಸಲಾಗಿದೆ.

ಗಾಂಜಾವನ್ನು ಕೇರಳ ಹಾಗೂ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುತ್ತಾರೆ. ಮುಂದಿನ ಕಾನೂನು ಕ್ರಮಕ್ಕಾಗಿ ಗಾಂಜಾವನ್ನು, ಸಾಗಾಣಿಕೆಗೆ ಬಳಸಿದ ವಾಹನಗಳನ್ನು ಹಾಗೂ ಆರೋಪಿಗಳ ಬಳಿಯಿದ್ದ ಎರಡು ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ:09/2026 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಈ ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ-ನಿರೀಕ್ಷಕರಾದ ಗುಣಪಾಲ ಜೆ ರವರು ಹಾಗೂ ಸಿಬ್ಬಂದಿಗಳಾದ ಹರೀಶ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಭವಿತ್ ರೈ, ನಾಗರಾಜ್, ಸತೀಶ್, ರಮೇಶ್, ಸುಬ್ರಮಣಿ, ವಿನೋದ್ ಮುಂತಾದವರು ಈ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.
