ನೈಜೀರಿಯಾದಲ್ಲಿ ಕುಳಿತು, ಬೆಂಗಳೂರು ಮೂಲದ ಪಾರ್ಮಾ ಕಂಪೆನಿಗೆ ನಕಲಿ ಇಮೇಲ್ ಮೂಲಕ ವಂಚನೆ ಮಾಡಲು ಯತ್ನಿಸಿದ್ದ ಸೈಬರ್ ವಂಚಕರ ಬಳಿ 2.16 ಕೋಟಿ ರೂಪಾಯಿಗಳನ್ನು ಸಿಸಿಬಿ ಸೈಬರ್ ಕ್ರೈಮ್ ಇಲಾಖೆ ಯಶಸ್ವಿಯಾಗಿ ರಕ್ಷಿಸಿದೆ. ಗ್ರೂಪ್ ಫಾರ್ಮಾ ಕಂಪನಿಯ ಅಕೌಂಟೆಂಟ್ ಕೇಶವ್ ಅವರ ಹೆಸರಿನಲ್ಲಿ ವಂಚಕರು ನಕಲಿ ಇಮೇಲ್ ಐಡಿ ಸೃಷ್ಟಿಸಿ, ಅದನ್ನು ರೆಡ್ಡಿಸ್ ಲ್ಯಾಬೋರೇಟರಿಗೆ ಕಳುಹಿಸಿದ್ದರು. ಗ್ರೂಪ್ ಫಾರ್ಮಾ ಮತ್ತು ರೆಡ್ಡಿಸ್ ಲ್ಯಾಬೋರೇಟರಿ ಉದ್ಯಮ ನಡೆಸುತ್ತಿದ್ದರಿಂದ, ವ್ಯವಹಾರ ಸಂಬಂಧಿತ ಪಾವತಿ ಎಂದು ಭಾವಿಸಿ ರೆಡ್ಡೀಸ್ ಲ್ಯಾಬೋರೇಟರಿ 2.16 ಕೋಟಿ ರೂಪಾಯಿಗಳನ್ನು ನಕಲಿ ಬ್ಯಾಂಕ್ ಖಾತೆಗೆ ವರ್ಗಾಯಿಸಿತು.
ಕೆಲ ಹೊತ್ತಿನ ಬಳಿಕ ಹಣ ಕಳುಹಿಸಿದ ಬಗ್ಗೆ ಗ್ರೂಪ್ ಫಾರ್ಮಾ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಹಣ ಜಮೆ ಆಗದಿರುವ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತ ಗ್ರೂಪ್ ಕಂಪನಿಯು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ದೂರು ಸ್ವೀಕರಿಸಿದ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಯಾವ ಖಾತೆಗೆ ಹಣ ಜಮೆಯಾಗಿದೆ ಎಂಬ ಮಾಹಿತಿ ಪಡೆದು, ನಂತರ ನಿರ್ದಿಷ್ಟ ಬ್ಯಾಂಕ್‌ಗೆ ನೋಟಿಸ್ ನೀಡಿ ನಕಲಿ ಬ್ಯಾಂಕ್ ಖಾತೆಯಲ್ಲಿರುವ ಹಣ ಜಪ್ತಿಗೆ ಕೋರಿದ್ದರು. ಅದರಂತೆ ಬ್ಯಾಂಕ್ ಅಧಿಕಾರಿಗಳು ಸಂಪೂರ್ಣ ಹಣ ಜಪ್ತಿ ಮಾಡಿದ್ದಾರೆ. ಗುಜರಾತಿನ ವಡೋದರದಲ್ಲಿರುವ ಮಹಿಳೆಯೊಬ್ಬರ ಬ್ಯಾಂಕ್ ಖಾತೆಗೆ ಪೂರ್ಣ ಹಣ ಜಮೆ ಆಗಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಆಕೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಕಾರಣ ಮಹಿಳೆಯನ್ನು ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಆಕೆ ಗುಣಮುಖರಾದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಖಾತೆಯನ್ನು ಗುಜರಾತಿನ ಪಟೇಲ್ ದಕ್ಷ್ಯಾ ಬೆನ್ ನಿಯಂತ್ರಿಸುತ್ತಿದ್ದಳು. ಹಣ ಪಾವತಿಯಾದ ವಿಚಾರ ತಿಳಿದು, ಅಕೌಂಟೆಂಟ್ ಕೇಶವ್ ಅವರು ತಕ್ಷಣ ಸಿಸಿಬಿ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಲೇ, ಸೈಬರ್ ಕ್ರೈಮ್ ತಂಡವು ಒಂದೇ ಗಂಟೆಯೊಳಗೆ ನಕಲಿ ಖಾತೆಯನ್ನು ಫ್ರೀಜ್ ಮಾಡಿದರೆ, ಹಣ ಮತ್ತಷ್ಟು ವರ್ಗಾವಣೆಯಾಗದಂತೆ ತಡೆಹಿಡಿಯಿತು. ನಂತರ ಕೋರ್ಟ್ ಮೂಲಕ 2.16 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವ ಆದೇಶ ಪಡೆದು ಕಂಪನಿಗೆ ಹಣ ಮರಳಿ ಬಂದಿತು. ತನಿಖೆ ವೇಳೆ ನೈಜೀರಿಯಾ ಮೂಲದ ಸೈಬರ್ ವಂಚಕರಿಂದ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಸಿಸಿಬಿ ಸೈಬರ್ ಕ್ರೈಂ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.
