ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದಾದ ಮೇಲೊಂದರಂತೆ ಕಂಟಕಗಳು ಎದುರಾಗುತ್ತಿವೆ. ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಗಳ ಬೆನ್ನಲ್ಲೇ ಇದೀಗ ಅಬಕಾರಿ ಇಲಾಖೆಯ ಮಹಾ ಹಗರಣವೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಇದೀಗ ಸಚಿವ ಆರ್.ಬಿ.ತಿಮ್ಮಾಪುರ ಅವರ ಕುರ್ಚಿ ಅಲುಗಾಡಿಸುತ್ತಿದ್ದು, ಸರ್ಕಾರದ ಮೂರನೇ ವಿಕೆಟ್ ಪತನವಾಗಲಿದೆಯಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.
ರಾಜ್ಯಪಾಲರ ಭಾಷಣ ವಿವಾದಗಳ ನಡುವೆ ಸಿಲುಕಿದ್ದ ಸರ್ಕಾರಕ್ಕೆ, ಅಬಕಾರಿ ಇಲಾಖೆಯ ಲಂಚ ಪ್ರಕರಣ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಹಗರಣವು ನೇರವಾಗಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಸುತ್ತಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಈಗಾಗಲೇ ಸದನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಈ ವಿಚಾರವನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಂಡಿದ್ದು, ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ನಿನ್ನೆ ನಡೆದ ಅಧಿವೇಶನದಲ್ಲಿ ಉಭಯ ವಿಪಕ್ಷಗಳ ನಾಯಕರು ಸದನದ ಬಾವಿಗಿಳಿದು ನಡೆಸಿದ ಧರಣಿ, ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.
ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಆರೋಪ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಸಚಿವರ ರಾಜೀನಾಮೆ ಪಡೆಯಲೇಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡಿ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಈ ಹೋರಾಟ ಕೇವಲ ಸದನಕ್ಕೆ ಸೀಮಿತವಾಗದೆ, ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆಯನ್ನು ವಿಪಕ್ಷಗಳು ನೀಡಿವೆ. ತಿಮ್ಮಾಪುರ ಅವರ ರಾಜೀನಾಮೆ ಪಡೆಯುವವರೆಗೂ ವಿರಮಿಸುವುದಿಲ್ಲ ಎಂದು ವಿಪಕ್ಷಗಳು ಶಪಥ ಮಾಡಿವೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಬಿಜೆಪಿಯ ಮೇಲೆ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಪ್ರತ್ಯಸ್ತ್ರವಾಗಿ, ಇದೀಗ ಬಿಜೆಪಿ ಅಬಕಾರಿ ಹಗರಣವನ್ನು ಬಳಸಿಕೊಳ್ಳಲು ರಣತಂತ್ರ ರೂಪಿಸಿದೆ.
ವಿರೋಧ ಪಕ್ಷದ ನಾಯಕರ ಪ್ರಕಾರ, ಅಬಕಾರಿ ಇಲಾಖೆಯಲ್ಲಿ ಬರೋಬ್ಬರಿ 2,500 ಕೋಟಿ ರೂಪಾಯಿಗಳ ಹಗರಣ ನಡೆದಿದೆ. ರಾಜ್ಯ ಸರ್ಕಾರವು ಇಲಾಖೆಗಳಿಗೆ ಆದಾಯ ಸಂಗ್ರಹದ ಗುರಿ ನಿಗದಿಪಡಿಸುವುದು ಸಾಮಾನ್ಯ. ಆದರೆ, ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ಮತ್ತು ಪರವಾನಗಿ ನವೀಕರಣಕ್ಕಾಗಿ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬುದು ಗಂಭೀರ ಆರೋಪವಾಗಿದೆ.
