ಮೂಡಬಿದ್ರೆ: ನೆಲ್ಲಿಕಾರು ಗ್ರಾಮ ಪಂಚಾಯತ್ ಹಾಲಿ ಉಪಾದ್ಯಕ್ಷರು ಶ್ರೀಮತಿ ಸುಶೀಲ ಎಂಬವರು ಅಧಿಕಾರ ಮತ್ತು ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪಗಳು ಸಾಬೀತಾಗಿರುವುದರಿಂದ ಅವರನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮದ ಪ್ರಕಾರ ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಿರುವುದಲ್ಲದೇ, ಮುಂದಿನ ಆರು ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಪಂಚಾಯತ್ ರಾಜ್ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ.
ಸರಕಾರಕ್ಕೆ ಸಂಬಂದ ಪಟ್ಟ ರೂ.48,289 ಗಳನ್ನು ದುರುಪಯೋಗ ಪಡಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ದಿನಾಂಕದಿಂದ ಶೇ.8ರ ಬಡ್ಡಿದರದೊಂದಿಗೆ ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು-2006ರ ನಿಯಮದಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ನಿರ್ಧರಿಸಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣ 246(8) ರನ್ವಯ ವಸೂಲಿ ಮಾಡಲು ಕಾರ್ಯನಿರ್ವಾಹರ ಅಧಿಕಾರಿ, ತಾಲೂಕು ಪಂಚಾಯಿತ್, ಮೂಡಬಿದ್ರೆ ತಾಲೂಕು, ಇವರಿಗೆ ಆದೇಶಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ನೆಲ್ಲಿಕಾರು ಪಂಚಾಯತಿನಲ್ಲಿ ಸುಶೀಲರವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಡಿಯಲ್ಲಿ ಮಾಂಟ್ರಾಡಿ ಶಾಲೆಯ ಮಳೆ ನೀರು ಕೊಯ್ಲು ಕಾಮಗಾರಿ, ನೆಲ್ಲಿಕಾರು ಗ್ರಾಮ ಪಂಚಾಯತ್ ಕಚೇರಿ ಬಳಿ ಇರುವ ಕೊಳವೆ ಬಾವಿಗೆ ಜಲಮರುಪೂರಣದ ಘಟಕ, ಮಾಂಟ್ರಾಡಿ ಗ್ರಾಮದ ಈಶ್ವರಬೆಟ್ಟುವಿನಿಂದ ಹಂಪೆಜಾಲು ತನಕ ಸಾರ್ವಜನಿಕ ತೋಡಿನ ಹೂಳೆತ್ತುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಗ್ರಾಮಸ್ಥ ಪ್ರಕಾಶ್ ಬಿನ್ ವಾಸು ಪೂಜಾರಿಯವರು ಒಂಬುಡ್ಸ್ಮೆನ್ ನಲ್ಲಿ ದೂರು ನೀಡಿದ್ದರು. ನಂತರ ಈ ಕಾಮಗಾರಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಉಗ್ಗಪ್ಪ ಮೂಲ್ಯರವರು ಮೊದಲ ಆಪಾದಿತರಾಗಿ ಅವ್ಯವಹಾರದಲ್ಲಿ ಭಾಗಿಯಾಗಿದ್ದುದು ಸಾಬೀತಾಗಿ ಅವರಿಂದ ಇಲಾಖೆ ಹಣ ವಸೂಲಿ ಮಾಡಿತ್ತು. ಆದರೆ ಸುಶೀಲಾರವರು ಇಲಾಖಾ ವಿಚಾರಣೆಗೆ ಸರಿಯಾದ ಸಮಯದಲ್ಲಿ ಹಾಜರಾಗದೆ ಹಣವನ್ನು ಮರುಪಾವತಿಯು ಮಾಡದೆ ಇರುವುದರಿಂದ ಇಲಾಖೆ ಇದೀಗ ಅವರ ಮೇಲೆ ಕಾನೂನು ಕ್ರಮ ಕೈಗೊಂಡಿದೆ.
