ಗ್ರಾಹಕರು ಅಡಮಾನವಿಟ್ಟ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನವನ್ನೇ ಮಾಯ ಮಾಡಿ ಬಿಟ್ಟ
ಆನ್‌ಲೈನ್ ಜೂಜಾಟದ ಚಟಕ್ಕೆ ಬಿದ್ದ ಇಂಡಿಯನ್ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಒಬ್ಬ ತನ್ನ ಬ್ಯಾಂಕ್‌ನಲ್ಲಿ ಗ್ರಾಹಕರು ಅಡಮಾನವಿಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಬಂಗಾರವನ್ನೇ ಮಾಯ ಮಾಡಿದ್ದಾನೆ. ಈ ಘಟನೆ ಇಂಡಿಯನ್ ಬ್ಯಾಂಕ್‌ನಲ್ಲಿ ನಡೆದಿದ್ದು, ಸದ್ಯ ಆರೋಪಿ ಕಿರಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗಿರಿನಗರದ ಇಂಡಿಯನ್ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಕಳೆದ ಹಲವು ತಿಂಗಳಿನಿಂದ ಈ ಕೃತ್ಯ ಎಸಗುತ್ತಾ ಬಂದಿದ್ದಾನೆ. ಸಾರ್ವಜನಿಕರು ತುರ್ತು ಅಗತ್ಯಗಳಿಗಾಗಿ ಬ್ಯಾಂಕ್‌ನಲ್ಲಿ ಅಡಮಾನವಿಟ್ಟಿದ್ದ ಚಿನ್ನಾಭರಣಗಳನ್ನು ಈತ ಯಾರಿಗೂ ತಿಳಿಯದಂತೆ ಕದ್ದಿದ್ದಾನೆ. ಒಟ್ಟು 4,12,65,000 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕಿರಣ್ ಕುಮಾರ್ ಹಂತ ಹಂತವಾಗಿ ಕಳವು ಮಾಡಿದ್ದಾನೆ.
ಆರೋಪಿ ಮೆನೇಜರ್ ಕಿರಣ್‌ಗೆ ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ದಂಧೆಯ ಚಟವಿತ್ತು. ಇದಕ್ಕಾಗಿ ಹಣ ಹೊಂದಿಸಲು ಬ್ಯಾಂಕ್‌ನ ಚಿನ್ನವನ್ನೇ ಬಳಸಿಕೊಂಡಿದ್ದಾನೆ. ಬ್ಯಾಂಕ್ ಮ್ಯಾನೇಜರ್ ಅವರು ಲಾಕರ್‌ನಲ್ಲಿರುವ ಚಿನ್ನಾಭರಣಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವಾಗ ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಬ್ಯಾಂಕ್ ವತಿಯಿಂದ ಆಂತರಿಕ ತನಿಖೆ ಮತ್ತು ಪೊಲೀಸ್ ವಿಚಾರಣೆ ನಡೆಸಿದಾಗ ಕಿರಣ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕದ್ದ ಚಿನ್ನವನ್ನು ಬೇರೆ ಪೈನಾನ್ಸ್ ನಲ್ಲಿ ಅಡವಿಟ್ಟು ಸುಮಾರು 2.5 ಕೋಟಿ ಪಡೆದಿದ್ದ. ಅಷ್ಟೋ ಹಣವನ್ನು ಬೆಟ್ಟಿಂಗ್ ನಲ್ಲಿ ಕಳೆದಿರುವುದು ತನಿಖೆಯಿಂದ ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಕಿರಣ್‌ನನ್ನು ಬಂಧನ ಮಾಡಿದ್ದು, ಆತನಿಂದ ಸದ್ಯಕ್ಕೆ 700 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಚಿನ್ನ ಎಲ್ಲಿಗೆ ಹೋಯಿತು? ಯಾರಿಗೆ ಮಾರಾಟ ಮಾಡಿದ್ದಾನೆ? ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
