ಪವಿತ್ರ ರಂಜಾನ್ ತಿಂಗಳಲ್ಲಿ ಕರುಣೆ ತೋರಿದ ಆಡಳಿತಗಾರರು: ಶಾರ್ಜಾ, ಅಜ್ಮಾನ್ ಜೈಲಿನ 872 ಕೈದಿಗಳಿಗೆ ಬಿಡುಗಡೆ ಭಾಗ್ಯ

ಅಂತಾರಾಷ್ಟ್ರೀಯ

ರಂಝಾನ್ ತಿಂಗಳು ಅನ್ನುವುದು ಕ್ಷಮೆಯ ತಿಂಗಳು. ದೇವನ ಸಂಪ್ರೀತಿ ಪಡೆಯಲು ಹಪಹಪಿಸುವ ಪಾವನ ಮಾಸವಾಗಿದೆ ರಂಝಾನ್ ತಿಂಗಳು. ಇಂತಹ ಪವಿತ್ರ ಮಾಸದಲ್ಲಿ ಶಾರ್ಜಾ ಮತ್ತು ಅಜ್ಮಾನ್ ಜೈಲಿನಲ್ಲಿರುವ ಖೈದಿಗಳಿಗೆ ಬಿಡುಗಡೆ ಭಾಗ್ಯ ದೊರೆತಿದೆ. ಉತ್ತಮ ಸನ್ನಡತೆ, ಸ್ವಭಾವ ಹೊಂದಿರುವ ವಿವಿಧ ಅಪರಾಧಗಳಿಗೆ ಜೈಲು ಶಿಕ್ಷೆ ಅನುಭವಿಸುತ್ತಿರುವ 872 ಖೈದಿಗಳಿಗೆ ಕ್ಷಮಾದಾನ ದೊರೆತಿದೆ. ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಶಾರ್ಜಾ ಆಡಳಿತಗಾರ ಶೇಖ್ ಡಾ. ಸುಲ್ತಾನ್ ಬಿನ್ ಮೊಹಮ್ಮದ್ ಅಲ್ ಖಾಸಿಮಿ ಅವರು ಶಾರ್ಜಾದಲ್ಲಿ 738 ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ.

ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಅಜ್ಮಾನ್ ಆಡಳಿತಗಾರ ಶೇಖ್ ಹುಮೈದ್ ಬಿನ್ ರಶೀದ್ ಅಲ್ ನುಐಮಿ ಅವರು ಅಜ್ಮಾನ್ ನಲ್ಲಿ 134 ಖೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಇದು ವಿವಿಧ ದೇಶಗಳ ಕೈದಿಗಳು ರಂಜಾನ್ ಸಮಯದಲ್ಲಿ ಹೊಸ ಜೀವನಕ್ಕೆ ದಾಪುಗಾಲಿಡಲು, ಕುಟುಂಬದ ಜೊತೆ ಸೇರಲು ಇದು ಅನುಕೂಲಕರವಾಗಿದೆ. ಅಜ್ಮಾನ್ ಪೊಲೀಸ್ ಕಮಾಂಡರ್ ಇನ್ ಚೀಫ್ ಮೇಜರ್ ಜನರಲ್ ಶೇಖ್ ಸುಲ್ತಾನ್ ಬಿನ್ ಅಬ್ದುಲ್ಲಾ ಅಲ್ ನುಐಮಿ ಅವರು ಆಡಳಿತಗಾರರ ಕರುಣೆಗೆ ಕೃತಜ್ಞತೆ ಸಲ್ಲಿಸಿದರು.

ರಂಝಾನ್ ಗೆ ಸಂಬಂಧಿಸಿದಂತೆ ಯುಎಇಯ ವಿವಿಧ ಜೈಲುಗಳಿಂದ 1440 ಕೈದಿಗಳನ್ನು ಬಿಡುಗಡೆ ಮಾಡಲು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಯ್ಯಾನ್ ಈಗಾಗಲೇ ಆದೇಶಿಸಿದ್ದಾರೆ.