ಡ್ರಗ್ಸ್‌ ದಂಧೆಕೋರರ ವಿರುದ್ಧ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಪ್ರೇಮಿಗಳ ಬಂಧನ, 18 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ರಾಜ್ಯ

ಕೇರಳ ಮೂಲದ ಅಶ್ವಿನ್‌ ಹಾಗೂ ಮುಬೀನಾ ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದಾಗ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ, ಇವರ ನಂಟು ಡ್ರಗ್ಸ್‌ ಮಾರಾಟ ಜಾಲಕ್ಕೂ ಕರೆತಂದಿತ್ತು. ಈ ಡ್ರಗ್ಸ್‌ ದಂಧೆಕೋರರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ದಂಧೆಯಲ್ಲಿ ತೊಡಗಿದ್ದ ಪ್ರೇಮಿಗಳನ್ನು ಬಂಧಿಸಿ 18 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ನಲ್ಲಿ ಸಹಜೀವನ ನಡೆಸುತ್ತಿದ್ದ ಅಶ್ವಿನ್‌ ಮತ್ತು ಮುಬೀನಾ, ಸುಲಭವಾಗಿ ಹಣ ಸಂಪಾದಿಸಲು ಡ್ರಗ್ಸ್‌ ಮಾಫಿಯಾ ಜತೆ ಕೈಜೋಡಿಸಿ ಥೈಲ್ಯಾಂಡ್‌ನಲ್ಲಿರುವ ಕೇರಳದ ಡ್ರಗ್‌ ಪೆಡ್ಲರ್‌ ಜತೆ ಸಂಪರ್ಕ ಬೆಳೆಸಿದ್ದರು. ಥೈಲ್ಯಾಂಡ್‌ನಿಂದ ಹೈಡ್ರೋ ಗಾಂಜಾ, ಎಲ್‌ಎಸ್‌ಡಿ ಸ್ಟ್ರಿಫ್ಸ್‌ ಸೇರಿದಂತೆ ನಾನಾ ಮಾದಕ ವಸ್ತುಗಳನ್ನು ತರಿಸಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಮಾರುತ್ತಿದ್ದರು. ವ್ಯಸನಿಗಳು ಹೇಳಿದ ಸ್ಥಳಕ್ಕೆ ಹೋಗಿ ಡ್ರಗ್ಸ್‌ ಕೊಟ್ಟು ತಮ್ಮ ಬ್ಯಾಂಕ್‌ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದರು.

ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಜೋಡಿಯೊಂದು ಡ್ರಗ್ಸ್‌ ಮಾರಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಆಧರಿಸಿ ಬೆಂಗಳೂರು ಸಿಸಿಬಿ ಪೊಲೀಸರು ರಾತ್ರಿ ವೇಳೆ ದಾಳಿ ನಡೆಸಿ, ಪ್ರೇಮಿಗಳಾದ ಅಶ್ವಿನ್‌ ಹಾಗೂ ಮುಬೀನಾರನ್ನು ಬಂಧಿಸಿ 13 ಕೋಟಿ ರೂ. ಮೌಲ್ಯದ 4 ಕೆ.ಜಿ. 500 ಗ್ರಾಂ ಹೈಡ್ರೋ ಗಾಂಜಾ, 500 ಗ್ರಾಂ. ಚರಸ್‌, 8,335 ಎಲ್‌ಎಸ್‌ಡಿ ಸ್ಟ್ರಿಫ್ಸ್‌ ಜಪ್ತಿ ಮಾಡಿದೆ.

ಬಂಧಿತರು ಡ್ರಗ್ಸ್‌ ಮಾರುತ್ತಿದ್ದ ಪ್ರದೇಶದಲ್ಲಿ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಾಗಿ, ಆರೋಪಿಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ ಮಾರಾಟ ಮಾಡಿರುವ ಅನುಮಾನವಿದೆ. ಡ್ರಗ್ಸ್‌ ಜಾಲದ ವಿರುದ್ಧದ ಕಾರ್ಯಾಚರಣೆ ನಿರಂತರವಾಗಿರಲಿದೆ ಎಂದಿದ್ದಾರೆ ನಗರ ಪೊಲೀಸ್ ಆಯುಕ್ತ ಸೀಮಂತ್‌ ಕುಮಾರ್ ಸಿಂಗ್.