ಬಂಟ್ವಾಳ ಕ್ಷೇತ್ರದ ರಾಜಕೀಯದಲ್ಲಿ ಬದಲಾವಣೆಯ ಮಾತುಗಳು ಜೋರಾಗುತ್ತಿವೆ. ಹಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿರುವ ಮಾಜಿ ಸಚಿವರನ್ನು ಈಗ ಅವರದೇ ಸಮುದಾಯದ ಕೆಲ ನಾಯಕರು ಹಾಗೂ ಕಾರ್ಯಕರ್ತರು ಒಪ್ಪಿಕೊಳ್ಳಲು ಇಷ್ಟಪಡುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇತರ ಸಮುದಾಯದ ಮತದಾರರನ್ನು ಮನವೊಲಿಸಿ ರಾಜಕೀಯವಾಗಿ ಮುನ್ನಡೆದಿದ್ದರೂ, ತಮ್ಮ ಸಮುದಾಯದ ನಾಯಕರಿಗೆ ಅವಕಾಶ ನೀಡಿಲ್ಲ ಎಂಬ ಅಸಮಾಧಾನ ಒಳಗೊಳಗೆ ಮೂಡಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಒತ್ತಾಯವೂ ಹೆಚ್ಚಾಗಿದೆ. ಬಿಲ್ಲವ ಪ್ರಮುಖ ನಾಯಕರಾದ ಪದ್ಮರಾಜ್, ಬೇಬಿ ಕುಂದರ್, ಅಲ್ಪಸಂಖ್ಯಾತ ನಾಯಕ ಎಂ.ಎಸ್. ಮಹಮ್ಮದ್ ಹಾಗೂ ಯುವ ನಾಯಕ ಇಬ್ರಾಹಿಂ ನವಾಜ್ ಮುಂತಾದವರು ಸ್ಪರ್ಧಿಸಿದರೆ ಗೆಲುವಿನ ಸಾಧ್ಯತೆ ಹೆಚ್ಚು ಎಂದು ಕೆಲವು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕ್ರಿಶ್ಚಿಯನ್ ಸಮುದಾಯದ ಪರವಾಗಿ ಈ ಬಾರಿ ಪ್ರಮುಖವಾಗಿ ಕೇಳಿಬರುತ್ತಿರುವ ಏಕೈಕ ಹೆಸರು ಪಿಯೂಸ್ ಎಲ್. ರೋಡ್ರಿಗಸ್ ಅವರದು. ಸಮಾಜಸೇವೆಯ ಮೂಲಕ ಗುರುತಿಸಿಕೊಂಡಿರುವ ಅವರು ಸಮುದಾಯದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರುವ ನಾಯಕರೆಂದು ಹೇಳಲಾಗುತ್ತಿದೆ. ಮಂಗಳೂರು ಕ್ರಿಶ್ಚಿಯನ್ ಮಹಾಸಭೆಯೂ ಇವರ ಅಭ್ಯರ್ಥಿತ್ವವನ್ನು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದ್ದು, ಕ್ರಿಶ್ಚಿಯನ್ ಸಮುದಾಯದೊಳಗೆ ಇವರನ್ನು ಒಕ್ಕೊರಲ ಅಭ್ಯರ್ಥಿಯಾಗಿ ನೋಡಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಾಜಕೀಯ ವಲಯದಲ್ಲೂ ಇವರ ಹೆಸರಿನ ಬಗ್ಗೆ ಯಾವುದೇ ದೊಡ್ಡ ಪೈಪೋಟಿ ಕಾಣಿಸದಿರುವುದು ಗಮನಾರ್ಹವಾಗಿದೆ. ಪಕ್ಷದೊಳಗೂ ಸಹ ಇವರಿಗೆ ಬೆಂಬಲ ಹೆಚ್ಚಾಗಿದ್ದು, ಸಮುದಾಯದ ಪ್ರತಿನಿಧಿಯಾಗಿ ಪಿಯೂಸ್ ಎಲ್. ರೋಡ್ರಿಗಸ್ ಅವರಿಗೆ ಅವಕಾಶ ನೀಡಬೇಕು ಎಂಬ ಮಾತುಗಳು ದಿನೇದಿನೇ ಬಲವಾಗುತ್ತಿರುವುದಾಗಿ ಹೇಳಲಾಗುತ್ತಿದೆ.
ಕ್ಷೇತ್ರದಲ್ಲಿ ಬದಲಾವಣೆಯ ಅಗತ್ಯವಿದೆ ಎಂಬ ಧ್ವನಿ ದಿನೇದಿನೇ ಬಲವಾಗುತ್ತಿದೆ.
ಇನ್ನೊಂದೆಡೆ ತಮ್ಮ(ಬಂಟ್ಸ್) ಸಮುದಾಯದ ಹಲವು ಕಾರ್ಯಕರ್ತರಿಗೆ ಪಕ್ಷದಲ್ಲಿ ರಾಜಕೀಯ ಅವಕಾಶ ಸಿಗದೆ ಹೋಗಿರುವುದೇ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ. ಸದಾನಂದ ಪೂಂಜಾ, ಎ.ಸಿ. ಭಂಡಾರಿ, ಪದ್ಮನಾಭ ರೈ, ಬೊಂಡಾಲ ಜಗ್ಗಣ್ಣ, ಅಶ್ವಿನಿ ಕುಮಾರ್ ರೈ, ರಾಮಕೃಷ್ಣ ಆಳ್ವ, ಸಂತೋಷ ಕುಮಾರ್ ಭಂಡಾರಿ ,ಚಂದ್ರಹಾಸ್ ಶೆಟ್ಟಿ ಪ್ರೀತಿ ಬೊಳಂತೂರು,ಸುಭಾಶ್ಚಂದ್ರ ಶೆಟ್ಟಿ , ಚಿತ್ತರಂಜನ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ ಮೊದಲಾದವರ ಪಟ್ಟ ಬೆಳೆಯುತ್ತಲೇ ಇದೆ
ಸೇರಿದಂತೆ ಹಲವರ ಹೆಸರುಗಳು ಅವಕಾಶ ತಪ್ಪಿಸಿಕೊಂಡವರ ಪಟ್ಟಿಯಲ್ಲಿ ಕೇಳಿಬರುತ್ತಿವೆ ಎಂದು ರಾಜಕೀಯ ವಲಯದಲ್ಲಿ ಮಾತು ಹರಿದಾಡುತ್ತಿದೆ.

ಇತ್ತೀಚೆಗೆ ಬಂಟ ಸಮುದಾಯದ ಕೆಲ ನಾಯಕರು ಗುಟ್ಟಾಗಿ ಚರ್ಚೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ತಮ್ಮ ಸಮುದಾಯದ ಕಾರ್ಯಕರ್ತರು ಬೆಳೆಯಲು ಅವಕಾಶ ಸಿಗಲಿಲ್ಲ ಎಂಬ ಅಸಮಾಧಾನವನ್ನು ಅವರು ವ್ಯಕ್ತಪಡಿಸುತ್ತಿರುವುದಾಗಿ ಹೇಳಲಾಗುತ್ತಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡಲಾಗುತ್ತಿದ್ದರೂ, ಆ ತತ್ವಗಳನ್ನು ಅನುಸರಿಸುವಲ್ಲಿ ಕೊರತೆ ಇದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಉತ್ತಮ ಸಂಘಟಕರಾಗಿ ಗುರುತಿಸಿಕೊಂಡಿರುವ ಯುವಕರ ಕಣ್ಮಣಿ ತುಂಬೆ ಪ್ರಕಾಶ್ ಶೆಟ್ಟಿ ಈ ಬಾರಿ ಬಂಟ್ವಾಳ ಕ್ಷೇತ್ರದ ಬಂಟ್ಸ್ ಸಮುದಾಯದ ಪ್ರಬಲ ಅಕಾಂಕ್ಷಿಯಾಗಿ ಕೇಳಿಬರುತ್ತಿದ್ದಾರೆ. . ಮುಂದಿನ ಚುನಾವಣೆಯಲ್ಲಿ ಬಂಟ್ವಾಳ ರಾಜಕೀಯದಲ್ಲಿ ಹೊಸ ಸಮೀಕರಣಗಳು ಮೂಡಿಬರಬಹುದೆಂಬ ನಿರೀಕ್ಷೆ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
