ಕೇಂದ್ರ ಸರ್ಕಾರ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳನ್ನು ಬರೋಬ್ಬರಿ 816ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 2011ರ ಜನಗಣತಿ ಆಧರಿಸಿ ಕ್ಷೇತ್ರಗಳ ಮರ ವಿಂಗಡಣೆ ಪ್ರಕ್ರಿಯೆ ನಡೆದಲ್ಲಿ ಕರ್ನಾಟಕದ ಹಾಲಿ ಸಂಸದರ ಸಂಖ್ಯೆ 28ರಿಂದ 42ಕ್ಕೆ ಏರಿಕೆಯಾಗಲಿದೆ. ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ತಿದ್ದುಪಡಿ ಕೂಡ ಈ ವಿಧೇಯಕದ ಭಾಗವಾಗಲಿದೆ. 2029ರ ಚುನಾವಣೆಗೆ ಮೊದಲು ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಎಲ್ಲಾ ಪಕ್ಷಗಳ ಸಹಮತದೊಂದಿಗೆ ಮಹತ್ವದ ತಿದ್ದುಪಡಿ ವಿಧೇಯಕ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕರ್ನಾಟಕದ ಈಗಿರುವ 28 ಲೋಕಸಭಾ ಸದಸ್ಯ ಸ್ಥಾನಗಳು 42ಕ್ಕೆ ಏರಿಕೆಯಾಗಲಿವೆ. ತಮಿಳುನಾಡು 39 ರಿಂದ 59, ಕೇರಳ 20 ರಿಂದ 30, ಆಂಧ್ರ ಪ್ರದೇಶ 25 ರಿಂದ 38, ಮಹಾರಾಷ್ಟ್ರ 48 ರಿಂದ 72 ಸಂಸದರ ಸ್ಥಾನಗಳನ್ನು ಹೊಂದುವ ಸಾಧ್ಯತೆ ಇದೆ ಎನ್ನಲಾಗಿದೆ. ಜನಸಂಖ್ಯೆಯ ಅನುಪಾತವನ್ನು ಕಾಯ್ದುಕೊಂಡು, ಒಟ್ಟು ಸೀಟುಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲೇ ಸರ್ಕಾರ ಈ ಕುರಿತ ಮಸೂದೆಯನ್ನು ಮಂಡಿಸುವ ಸಾಧ್ಯತೆ ದಟ್ಟವಾಗಿದೆ. ಇದರ ಬಗ್ಗೆ ವಿರೋಧ ಪಕ್ಷಗಳು ಮತ್ತು ಎನ್ಡಿಎ ಮೈತ್ರಿಪಕ್ಷಗಳೊಂದಿಗೆ ಒಮ್ಮತ ಮೂಡಿಸಲು ಸರ್ಕಾರ ಈಗಾಗಲೇ ಕಸರತ್ತು ಆರಂಭಿಸಿದೆ.
ಇನ್ನು ಕ್ಷೇತ್ರ ಪುನರ್ವಿಂಗಡಣೆ ಅಥವಾ ಡಿಲಿಮಿಟೇಶನ್ ಪ್ರಕ್ರಿಯೆಯು ಜನಸಂಖ್ಯೆಯನ್ನು ಆಧರಿಸಿ ನಡೆಯುವುದರಿಂದ, ಯಾವ ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಾಗಿದೆಯೋ ಆ ರಾಜ್ಯಗಳಿಗೆ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳು ಒಲಿಯಲಿವೆ. ಇದು ಈಗ ವಿರೋಧಕ್ಕೆ ಕಾರಣವಾಗಿದೆ.
ನಮ್ಮ ದಕ್ಷಿಣ ಭಾರತದ ರಾಜ್ಯಗಳ ಪೈಕಿ ತಮಿಳುನಾಡಿನಲ್ಲಿ 20 ಸೀಟು ಹೆಚ್ಚಳದೊಂದಿಗೆ 39 ರಿಂದ 59ಕ್ಕೆ ಏರಲಿದೆ. ಕರ್ನಾಟಕದಲ್ಲಿ 14 ಸೀಟು ಹೆಚ್ಚಾಗಲಿದ್ದು, ಸದ್ಯ ಇರುವ 28 ಲೋಕಸಭಾ ಸ್ಥಾನಗಳು 42 ಆಗಲಿವೆ. ಆಂಧ್ರಪ್ರದೇಶದಲ್ಲಿ 13 ಸೀಟು ಹೆಚ್ಚಾಗಿ 25 ರಿಂದ 38ಕ್ಕೆ ಬಂದು ನಿಲ್ಲಲಿದೆ. ಕೇರಳದಲ್ಲಿ 20 ರಿಂದ 30ಕ್ಕೆ ಲೋಕಸಭಾ ಸ್ಥಾನಗಳು ಹೆಚ್ಚಾಗಲಿದ್ದು, 10 ಸೀಟು ಏರಿಕೆಯಾಗಲಿದೆ. ತೆಲಂಗಾಣದಲ್ಲಿ 17 ರಿಂದ 26ಕ್ಕೆ 9 ಸೀಟು ಹೆಚ್ಚಳ ಆಗಲಿದೆ. ಈ ಡೇಟಾ ನೋಡಿದರೆ, ದಕ್ಷಿಣ ಭಾರತದ ರಾಜ್ಯಗಳ ಒಟ್ಟು ಸೀಟುಗಳ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗುವುದಿಲ್ಲ, ಬದಲಾಗಿ ಹೆಚ್ಚಳವೇ ಆಗಲಿದೆ ಎಂದು ಸರ್ಕಾರ ಹೇಳುತ್ತಿದೆ.
ದಕ್ಷಿಣ ಭಾರತದ ರಾಜ್ಯಗಳು ಲೋಕಸಭಾ ಕ್ಷೇತ್ರಗಳ ಡಿಲಿಮಿಟೇಶನ್ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಿವೆ. ಇದಕ್ಕೆ ಕಾರಣ ಜನಸಂಖ್ಯೆಯ ಬೆಳವಣಿಗೆಯಲ್ಲಿನ ಅಸಮಾನತೆ. ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ದಕ್ಷಿಣದ ರಾಜ್ಯಗಳು ಕುಟುಂಬ ಕಲ್ಯಾಣ ಯೋಜನೆಗಳು, ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಯ ಮೂಲಕ ಜನಸಂಖ್ಯೆಯ ಬೆಳವಣಿಗೆಯನ್ನು ಯಶಸ್ವಿಯಾಗಿ ನಿಯಂತ್ರಿಸಿವೆ.
