ಕರಾವಳಿಯಲ್ಲಿ ಮತ್ತೆ ಬಾಲ ಬಿಚ್ಚಿದ ರೌಡಿಗಳು. ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಮೇಲೆ ದುಷ್ಕರ್ಮಿಗಳು ಬೆಳ್ಳಂಬೆಳಿಗ್ಗೆ ಮಾರಕಾಸ್ತ್ರಗಳಿಂದ ರೌಡಿ ಶೀಟರ್ ಒಬ್ಬನನ್ನು ಕಡಿದು ಕೊಲೆ ಮಾಡಿದ ಭೀಕರ ಘಟನೆಯೊಂದು ನಡೆದಿರುತ್ತದೆ. ರೌಡಿಶೀಟರ್ ಆರಿಫ್ ಯಾನೆ ಟಾಬ್ಲೆಟ್ ಆರಿಫ್ ಎಂಬಾತನನ್ನು ಕೊಲೆಗೈಯ್ಯಲಾಗಿದೆ.
ಆರಿಫ್ ಯಾನೆ ಟಾಬ್ಲೆಟ್ ಆರಿಫ್, ಮುಳ್ಳುಗುಡ್ಡೆ, ತಲಪಾಡಿ ನಿವಾಸಿಯಾಗಿದ್ದು, ಈತ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಕೂಡಾ ಆಗಿದ್ದ. ತೊಕ್ಕೊಟ್ಟು ಫ್ಲೈ ಓವರ್ ಬ್ರಿಜ್ ಮೇಲೆಯೇ ಈ ಭಯಾನಕ ಕೊಲೆ ನಡೆದಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ಆರಿಫ್‌ಗೆ ದುಷ್ಕರ್ಮಿಗಳ ತಂಡ ಹಿಂಬದಿಂದ ಕಾರ್ ಡಿಕ್ಕಿ ಹೊಡಿಸಿ ಕೆಳಗೆ ಬೀಳಿಸಿದ್ದಾರೆ. ರಸ್ತೆಗೆ ಬಿದ್ದ ಆರಿಫ್‌ನನ್ನು ಮಾರಕಾಸ್ತ್ರಗಳಿಂದ ತಲೆ ಭಾಗಕ್ಕೆ ಕಡಿದು ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ಬಳಿಕ ಬಂದ ವಾಹನದಲ್ಲೇ ಆರೋಪಿಗಳು ಪರಾರಿಯಾಗಿದ್ದಾರೆ.
ಈ ಘಟನೆಗೆ ಗ್ಯಾಂಗ್ ವಾರ್ ಕಾರಣ ಎಂಬ ಶಂಕೆ ಮೂಡಿದೆ. ಕಳೆದ 2022ರ ಮೇ ತಿಂಗಳಲ್ಲಿಯೂ ಇದೇ ರೀತಿ ಆರೀಫ್ ಕೊಲೆಗೆ ಯತ್ನ ನಡೆದಿತ್ತು. ಬೆಳಗ್ಗೆ ಬೈಕಲ್ಲಿ ಧಕ್ಕೆಗೆ ತೆರಳುತ್ತಿದ್ದ ವೇಳೆ ಬಜಾಲಿನ ಟೊಪ್ಪಿ ನೌಫಾಲ್ ಮತ್ತು ತಂಡವು ದಾಳಿ ನಡೆಸಿ ಚೂರಿ ಇರಿದು ಕೊಲೆಗೆ ಯತ್ನಿಸಿತ್ತು. ಅ ಹತ್ಯಾಯತ್ನದಿಂದ ಪಾರಾಗಿದ್ದ. ಅಪರಾಧ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದ ಆರೀಪ್ ನನ್ನು ವೈಯಕ್ತಿಕ ದ್ವೇಷದಿಂದ ಹತ್ಯೆಗೈದಿರುವ ಶಂಕೆ ವ್ಯಕ್ಕವಾಗುತ್ತಿದೆ. ಈತನ ವಿರುದ್ದ 2008ರಲ್ಲಿ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.
