ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಇದರ ಸ್ವಾಧೀನದಲ್ಲಿರುವ ಸ್ಥಳಕ್ಕೆ ತಡೆಬೇಲಿ ಹಾಕುವ ಸಂದರ್ಭದಲ್ಲಿ ಟ್ರಸ್ಟ್ ನ ಮಹಿಳಾ ಕಾರ್ಯದರ್ಶಿಗೆ ತಡೆಯೊಡ್ಡಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಉಳ್ಳಾಲ ಪೊಲೀಸ್ ನಿರೀಕ್ಷಕ ಹೆಚ್.ಎನ್ ಬಾಲಕೃಷ್ಣ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಮಲ ಭಾರತ್ ಚಾರಿಟೇಬಲ್ ಟ್ರಸ್ಟ್ ಗೆ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ, ಸರ್ವೆ ನಂ. 149 ರಲ್ಲಿ ಎರಡು ಎಕರೆ ಜಮೀನು ಮಂಜೂರಾಗಿರುತ್ತದೆ. ಜ.26 ಬೆಳಗ್ಗೆ ಸರಿಸುಮಾರು 8ರ ಸಮಯಕ್ಕೆ ಟ್ರಸ್ಟ್ ಕಾರ್ಯದರ್ಶಿ ಲತಾ ರೈ, ಸದಸ್ಯರಾದ ಸಿ.ಎನ್.ಶಂಕರ್ ರಾವ್, ಕೆ.ಎಂ.ಬಾಲಕೃಷ್ಣ, ಜಗದೀಶ್ ಎಂಬವರೊಂದಿಗೆ ಟ್ರಸ್ಟ್ ಗೆ ಸಂಬಂಧ ಪಟ್ಟ ಜಾಗದ ಗಡಿಯಲ್ಲಿ, ತಡೆಬೇಲಿ ಹಾಕಲು ಸ್ಥಳಕ್ಕೆ ಸರಿ-ಸುಮಾರು 11 ಗಂಟೆಯ ಸಮಯಕ್ಕೆ ಹೋದಾಗ ಕೊಣಾಜೆ ಠಾಣೆಯ ಜವಾಬ್ದಾರಿ ಹೊಂದಿದ್ದ ಉಳ್ಳಾಲದ ಪೊಲೀಸ್ ನಿರೀಕ್ಷಕರು ಬಾಲಕೃಷ್ಣ ಎಚ್.ಎನ್ ಅವರು ಸದ್ರಿ ಜಾಗಕ್ಕೆ ಪ್ರವೇಶ ಮಾಡಿ ಸೈಟ್‌ನಲ್ಲಿದ್ದವರೆಲ್ಲರನ್ನೂ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿದ್ದಾರೆಂದು ಆರೋಪಿಸಲಾಗಿದೆ.
ಲತಾ ರೈ ಅವರು ಹೈಕೋರ್ಟ್ ಆದೇಶದ ಬಗ್ಗೆ ತಿಳಿಸಿದರೂ ಕೂಡ ಅದನ್ನು ಒಪ್ಪಿಕೊಳ್ಳದೇ ಸೈಟ್‌ನಲ್ಲಿ ಕೆಲಸಗಳನ್ನು ನಿಲ್ಲಿಸಲು ಇಲಾಖೆಯ ಮೇಲಾಧಿಕಾರಿಗಳ ಆದೇಶವಿದೆ ಎಂದು ಹೇಳಿದ ಪೊಲೀಸ್ ನಿರೀಕ್ಷಕ ಬಾಲಕೃಷ್ಣರವರು ಲತಾ ಅವರ ಕೈಗೆ ಹೊಡೆದು, ಕೈಯಲ್ಲಿದ್ದ ಮೊಬೈಲ್ ಫೋನ್ ನ್ನು ಕಸಿದು ನೆಲಕ್ಕೆ ಬಡಿಯಲು ಯತ್ನಿಸಿದ್ದಾರೆ. ಈ ವೇಳೆ ಲತಾ ಅವರ ರಕ್ಷಣೆಗೆ ಬಂದ ಅಭಿಷೇಕ್ ಭಂಡಾರಿ ಎಂಬವರಿಗೂ ಪೊಲೀಸ್ ಅಧಿಕಾರಿ ಥಳಿಸಿದ್ದು, ಘಟನೆಯನ್ನು ಮೊಬೈಲಿನಲ್ಲಿರೆಕಾರ್ಡ್ ಮಾಡುತ್ತಿದ್ದ ಅವರ ಮೊಬೈಲನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಏರು ಧ್ವನಿಯಲ್ಲಿ ಕಿರುಚಾಡಿದ ಬಾಲಕೃಷ್ಣ ಅವರು ಸ್ಥಳದಲ್ಲಿದ್ದವರೆಲ್ಲರನ್ನೂ ಬಂಧಿಸುವುದಾಗಿ ಬೆದರಿಸಿದ್ದಲ್ಲದೆ, ಪೊಲೀಸ್ ವ್ಯಾನ್‌ನಲ್ಲಿ ಹಾಕುವಂತೆ ಪೊಲೀಸ್ ಸಿಬ್ಬಂದಿಯವರಿಗೆ ಸೂಚಿಸಿದ್ದಾರೆಂದು ಲತಾ ರೈ ಅವರು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಲತಾ ನೀಡಿರುವ ದೂರಿನಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿದೆ.
