ಕಳೆದ 33 ವರ್ಷಗಳಲ್ಲಿ ದ.ಕ.ಜಿಲ್ಲೆಯ ಅಭಿವೃದ್ಧಿಗೆ ಎಳ್ಳಷ್ಟೂ ಕಾಳಜಿ ವಹಿಸದೆ, ಜಾತಿ ಧರ್ಮದ ಹೆಸರಿನಲ್ಲಿ ದ್ವೇಷ ರಾಜಕಾರಣದ ಮೂಲಕ ಅದೆಷ್ಟೋ ಅಮಾಯಕ ಯುವಕರನ್ನು ಬಲಿ ತೆಗೆದುಕೊಂಡು, ಹಿಂದುತ್ವ, ಧರ್ಮ ರಕ್ಷಣೆಯ ಅಮಲನ್ನು ಯುವಕರ ತಲೆಗೇರಿಸಿ ಸಾವಿರಾರು ಯುವಕರ ಬಾಳನ್ನೇ ಸರ್ವನಾಶ ಮಾಡಿದ ಸಂಘಪರಿವಾರದ ಹಿಂದುತ್ವದಿಂದಾಗಿಯೇ ಜಿಲ್ಲೆಯ ಸೌಹಾರ್ದತೆ ಹಾಳಾಗಿದೆ. ಮಾತ್ರವಲ್ಲದೆ ಜಿಲ್ಲೆಯ ಅಭಿವೃದ್ದಿಯೂ ಕೂಡ ಕುಂಠಿತವಾಗಿದೆ ಎಂದು CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು.
ಅವರು CPIM ನೇತ್ರತ್ವದಲ್ಲಿ ಹರೇಕಳದಲ್ಲಿ ಜರುಗಿದ ಮುಡಿಪು ವಲಯ ಮಟ್ಟದ ರಾಜಕೀಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಹಿಂದುತ್ವದ ಭದ್ರಕೋಟೆಯೆಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ಸಂಘಪರಿವಾರ, ಕಳೆದ ಮೂರು ದಶಕದಲ್ಲಿ ಈ ಜಿಲ್ಲೆಯ ಶಿಕ್ಷಣ,ಉದ್ಯೋಗ ಆರೋಗ್ಯದ ವಿಚಾರದಲ್ಲಿ ಹಾಗೂ ಜನಸಾಮಾನ್ಯರ ಬದುಕಿನ ಬಗ್ಗೆ ಎಷ್ಟು ಮುತುವರ್ಜಿ ವಹಿಸಿದೆ.?ಶೈಕ್ಷಣಿಕ ಕೇಂದ್ರವಾದ ಈ ಜಿಲ್ಲೆಯಲ್ಲಿ ವರ್ಷಕ್ಕೆ 40,000ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪದವಿ ಪಡೆದು ಉದ್ಯೋಗಕ್ಕಾಗಿ ಕ್ಯೂ ನಿಂತರೆ, ಅಂತಹ ಯುವಕರಿಗಾಗಿ ಎಷ್ಟು ಉದ್ಯೋಗಗಳನ್ನು ಸ್ರಷ್ಠಿಸಿದೆ. ಇಲ್ಲಿ ಜನಸಾಮಾನ್ಯರ ಆರೋಗ್ಯವನ್ನು ಕೇಳುವ ಗತಿ ಇಲ್ಲದಂತಾಗಿದೆ. ಬಡವರಿಗೆ ಉಚಿತ ಮನೆನಿವೇಶನ ಮರೀಚಿಕೆಯಾಗಿದೆ. ಧರ್ಮ ಅಪಾಯದಲ್ಲಿದೆ, ಧರ್ಮ ರಕ್ಷಣೆಯ ಹೆಸರಿನಲ್ಲಿ ಹಿಂದುಳಿದ ವರ್ಗಗಳ ಯುವಕರನ್ನು ಬಲಿ ತೆಗೆದುಕೊಂಡು, ಅದೇ ಹಿಂದುತ್ವದ ಹೆಸರಿನಲ್ಲೇ ಅಧಿಕಾರದ ರುಚಿಯನ್ನು ಕಂಡಿರುವ ಬಿಜೆಪಿ ಸಂಘಪರಿವಾರದ ಮುಖಂಡರಿಗೆ ಅವರ ಸಂಬಂಧಿಕರಿಗೆ ಧರ್ಮ ರಕ್ಷಣೆಯ ಜವಾಬ್ದಾರಿ ಇಲ್ಲವೇ… ಅವರಿಗೆ ಈ ಜಿಲ್ಲೆಯ ಸಂಪತ್ತನ್ನು ಲೂಟಿ ಮಾಡಲು, ಸರಕಾರಿ ಹಣವನ್ನು ದೋಚಲು, ಸ್ಮಾರ್ಟ್ ಸಿಟಿ, ಟಿಡಿಆರ್ ಹೆಸರಿನಲ್ಲಿ ಕೋಟ್ಯಾಂತರ ಹಣವನ್ನು ನುಂಗಿ ಹಾಕಲು ಮಾತ್ರವೇ ಜವಾಬ್ದಾರಿ ಎಂದು ಪ್ರಶ್ನಿಸಿದರು.

CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುಕುಮಾರ್ ತೊಕ್ಕೋಟುರವರು ಮಾತನಾಡುತ್ತಾ, ದೇಶದ ಸ್ವಾತಂತ್ರ್ಯಕ್ಕಾಗಿ ಎಳ್ಳಷ್ಟೂ ಕಾರ್ಯ ನಿರ್ವಹಿಸದ, ಬ್ರಿಟೀಷರೊಂದಿಗೆ ಶಾಮೀಲಾಗಿ ದೇಶದ್ರೋಹದ ಕ್ರತ್ಯವೆಸಗಿದ ಸಂಘಪರಿವಾರ ಇಂದು ದೇಶವನ್ನು ನಿಯಂತ್ರಿಸುತ್ತಿರುವುದು ದೇಶದ ಪ್ರಜಾಪ್ರಭುತ್ವ ಜಾತ್ಯಾತೀತ ಮೌಲ್ಯಗಳಿಗೆ ಭಾರೀ ಸವಾಲಾಗಿದೆ. ಇದಕ್ಕೆ ತಡೆಯೊಡ್ಡುವಂತಾಗಲು ಬಿಜೆಪಿಯನ್ನು ಸೋಲಿಸಿ ಇಂಡಿಯಾ ಕೂಟದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು CPIM ಯುವ ನಾಯಕರಾದ ರಫೀಕ್ ಹರೇಕಳರವರು ವಹಿಸಿದ್ದರು ಸಭೆಯಲ್ಲಿ CPIM ಯುವ ನಾಯಕರಾದ ರಿಜ್ವಾನ್ ಹರೇಕಳ, ರಜಾಕ್ ಮುಡಿಪು, ಅಶ್ರಫ್ ಮುಂತಾದವರು ಹಾಜರಿದ್ದರು.
