ಹಿಂದೂ ವಿವಾಹ ಕಾಯ್ದೆ ಪ್ರಕಾರ ಮದುವೆಗೆ ‘ಕನ್ಯಾದಾನ’ ಕಡ್ಡಾಯವಲ್ಲ; ಹಿಂದೂ ವಿವಾಹಕ್ಕೆ ಸಪ್ತಪದಿ ಹಾಕಿದರೂ ಸಾಕು: ಹೈಕೋರ್ಟ್

ರಾಷ್ಟ್ರೀಯ

ಹಿಂದೂ ವಿವಾಹ ಕಾಯ್ದೆ ಪ್ರಕಾರ ಮದುವೆಗೆ ‘ಕನ್ಯಾದಾನ’ ಕಡ್ಡಾಯವಲ್ಲ. ಈ ಕಾಯ್ದೆ ನಿಬಂಧನೆಗಳ ಪ್ರಕಾರ, ಹಿಂದೂ ವಿವಾಹಕ್ಕೆ ಸಪ್ತಪದಿ ಹಾಕಿದರೂ ಸಾಕು ಎಂದು ಸ್ಪಷ್ಟಪಡಿಸಿದೆ. ಅಶುತೋಷ್ ಯಾದವ್ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ನ ಲಕ್ನೋ ಪೀಠ ಈ ತೀರ್ಪು ನೀಡಿದೆ. ಅಷುತೋಷ್ ಎಂಬಾತ ಕಾನೂನು ಪ್ರಕಾರ ತನ್ನ ಮದುವೆಗೆ ಸಮಾರಂಭ ಅಗತ್ಯವಿದ್ದು, ಅದು ಏರ್ಪಡಿಸಿಲ್ಲ. ಹಾಗಾಗಿ ನನ್ನ ಮದುವೆ ಕಾನೂನುಬದ್ಧವಾಗಿಲ್ಲ ಎಂದು ವಾದಿಸಿದರು. ಮದುವೆ ದೃಢೀಕರಿಸಲು ಸಾಕ್ಷಿಗಳನ್ನು ಕರೆಯುವಂತೆ ಅವರು ಮನವಿ ಮಾಡಿಕೊಂಡಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಅಷುತೋಷ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಾದ ಆಲಿಸಿದ ಬಳಿಕ ಕನ್ಯಾದಾನ ಅಗತ್ಯವಿಲ್ಲ ಎಂದು ಹೇಳಿತು. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ಅನ್ನು ಉಲ್ಲೇಖಿಸಿ ‘ಏಳು ಹೆಜ್ಜೆಗಳು’ ವಿವಾಹಕ್ಕೆ ಕಡ್ಡಾಯವೆಂದು ಪರಿಗಣಿಸಲಾಗುತ್ತದೆ. ಕನ್ಯಾದಾನ ಕಡ್ಡಾಯವಲ್ಲ. ಆದ್ದರಿಂದ ಸಾಕ್ಷಿಗಳಿಗೆ ಸಮನ್ಸ್ ನೀಡುವ ಅಗತ್ಯವಿಲ್ಲ ಎಂದು ಅಷುತೋಷ್ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯನ್ನು ಪೀಠ ವಜಾಗೊಳಿಸಿತು.

ಕನ್ಯಾದಾನ ವಧುವಿನ ಕುಟುಂಬದವರು ನಡೆಸುತ್ತಾರೆ. ಇದರ ಸರಿಯಾದ ಅರ್ಥ ಹೆಣ್ಣು ಮಕ್ಕಳ ವಿನಿಮಯ. ಮದುವೆಯ ಸಂದರ್ಭ ವಧುವಿನ ತಂದೆ ವರನ ಕೈಗೆ ವಧುವಿನ ಕೈಯಿಟ್ಟು ಈಕೆಯ ಜವಾಬ್ದಾರಿ ನಿಮ್ಮದು ಹೇಳುವುದಾಗಿದೆ. ಆಗ ವರನು ತನ್ನ ಜೀವನದುದ್ದಕ್ಕೂ ನಿಮ್ಮ ಮಗಳ ಜವಾಬ್ದಾರಿ ನನ್ನದೇ ಎಂದು ಭರವಸೆ ನೀಡುತ್ತಾನೆ. ಈ ಪದ್ಧತಿಗೆ ಕನ್ಯಾದಾನ ಎಂದು ಕರೆಯಲಾಗುತ್ತದೆ. ಒಬ್ಬ ತಂದೆ ತನ್ನ ಮಗಳ ಜವಾಬ್ದಾರಿಯನ್ನು ವರನಿಗೆ ಒಪ್ಪಿಸಿದರೆ, ಅದನ್ನು ವರ ತೆಗೆದುಕೊಳ್ಳಬೇಕು ಎಂದು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ.