ವಿಟ್ಲ: ಪುಣಚ ಗ್ರಾಮದ ಬರೆಂಜ – ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದುಬಿದ್ದು ಏಳು ಕಾರ್ಮಿಕರು ಗಾಯಗೊಂಡಿದ್ದಾರೆ. ಬರೆಂಜ-ಕುರುಡಕಟ್ಟೆ ಮೂಲಕ ಪುತ್ತೂರಿನ ಬಲ್ನಾಡುವಿಗೆ ಸಂಪರ್ಕವಾಗುವ ರಸ್ತೆಗೆ ಮಲ್ಲಿಪ್ಪಾಡಿಯಲ್ಲಿನ ಹೊಳೆಗೆ ಸೇತುವೆ ನಿರ್ಮಾಣವಾಗುತ್ತಿದೆ.

ಸುಮಾರು ಎರಡು ಕೋಟಿ ವೆಚ್ಚದ ಸೇತುವೆ ನಿರ್ಮಾಣದ ಕಾಮಗಾರಿ ಆರು ತಿಂಗಳಿನಿಂದ ನಡೆಯುತ್ತಿದೆ. ಇಂದು ಕೊನೆಯ ಹಂತದ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಏಕಾಏಕಿ ಕುಸಿದು ಬಿದ್ದಿದೆ. ಆ ಸಂದರ್ಭ ಅವಶೇಷಗಳ ಅಡಿಯಲ್ಲಿ ಏಳು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ತಕ್ಷಣವೇ ಸ್ಥಳೀಯರು ಮತ್ತು ಇತರ ಕಾರ್ಮಿಕರು ಆರು ಜನರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ ಮತ್ತೋರ್ವ ಕಾರ್ಮಿಕರನ್ನು ಕೆಲಕ್ಷಣಗಳ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಪುತ್ತೂರಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೇತುವೆಯ ಕೊನೆಯ ಹಂತದ ಕಾರ್ಯವಾಗಿ ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದ ಸಮಯ ತಳಭಾಗದಿಂದ ನೀಡಿದ ಕಬ್ಬಿಣದ ಕಂಬಗಳು ಜಾರಿದ ಹಿನ್ನೆಲೆಯಲ್ಲಿ ಮೇಲ್ಭಾಗದ ಸಂಪೂರ್ಣ ಕಾಂಕ್ರೀಟ್ ವ್ಯವಸ್ಥೆ ಕುಸಿತವಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
