ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಮೂರು ಪಕ್ಷದಲ್ಲೂ ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. 2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಭರ್ಜರಿ ಬಹುಮತ ಗಳಿಸಿದ್ದ ಕಾಂಗ್ರೆಸ್ ಗೆ 2024 ರ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಆರಂಭದಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಗೆ 28 ಲೋಕಸಭಾ ಕ್ಷೇತ್ರಗಳ ಫೈಕಿ 20 ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಟ್ ಟಾರ್ಗೆಟ್ ನೀಡಿತ್ತು. ಅದರಂತೆ ಕಾಂಗ್ರೆಸ್ ಘಟಾನುಘಟಿ ನಾಯಕರು ಅಬ್ಬರ ಪ್ರಚಾರವನ್ನು ನಡೆಸಿದ್ದು, ಇದೀಗ ಕಾಂಗ್ರೆಸ್ ಪಾಳೆಯದಲ್ಲಿ ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. 28 ಕ್ಷೇತ್ರಗಳ ಪೈಕಿ ಕನಿಷ್ಠ 18-21ರಲ್ಲಿ ಗೆಲುವು ಖಚಿತ ಎಂಬ ವಿಶ್ವಾಸ ಪಕ್ಷದ ನಾಯಕರಲ್ಲಿ ಕಂಡು ಬರುತ್ತಿದೆ.
ಈ ನಡುವೆ ಬಿಜೆಪಿ ಎಲ್ಲಾ ಸ್ಥಾನಗಳಲ್ಲೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ. ಜನರ ಪ್ರತಿಕ್ರಿಯೆ ಮತ್ತು ಮೂರು ಹಂತದ ಪ್ರಚಾರದ ಆಧಾರದ ಮೇಲೆ, ಜೆಡಿಎಸ್ ಮೈತ್ರಿ ಇದೆಲ್ಲವನ್ನು ಗಮನಿಸಿ ಎಲ್ಲಾ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿಯ ಸಂಯೋಜಕ ವಿ ಸುನೀಲ್ ಕುಮಾರ್ ಹೇಳುತ್ತಿದ್ದಾರೆ. ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಉತ್ತಮವಾಗಿ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಇದು ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಲಾಭದಾಯಕವಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡಿಮೆ ಸಮಯದಲ್ಲಿ ಹೆಚ್ಚಿನ ಜನರನ್ನು ತಲುಪಲು ಪಕ್ಷ ಮಾಡಿದ ಪ್ರಯತ್ನವು ಫಲ. ನಾವು ಮೂರು ರೀತಿಯಲ್ಲಿ ಸಾರ್ವಜನಿಕರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೆವು. ದೊಡ್ಡ ಸಾರ್ವಜನಿಕ ಸಭೆಗಳು, ರೋಡ್‌ಶೋಗಳು ಮತ್ತು ಮನೆ-ಮನೆ ಪ್ರಚಾರದ ಮೂಲಕ ನಮ್ಮ ಸಂದೇಶವನ್ನು ರವಾನಿಸಿದ್ದೇವೆಂದು ವಿವರಿಸಿದ್ದಾರೆ
