ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಬೆದರಿಸಿ ಹಣ ಸುಲಿಗೆ ಪ್ರಕರಣ; ಕೇರಳ ಮೂಲದ ಆರೋಪಿಗಳ ಬಂಧನ

ರಾಷ್ಟ್ರೀಯ

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಜಾ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ್ದ ಕೇರಳ ಗ್ಯಾಂಗ್ ವೊಂದನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು 12 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ತಿರುವನಂತಪುರದ ಹೊಟೇಲ್ ಉದ್ಯಮಿ ಎಎಸ್ ಪ್ರಮೋದ್ ಬೆಂಗಳೂರಿನಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳಾದ ಅನಂತಕೃಷ್ಣ ಮತ್ತು ಆದರ್ಶ್ ಮತ್ತು ದೀಪಕ್ ಆರ್ ಚಂದ್ರ ಬಂಧಿತ ಆರೋಪಿಗಳು।

ಪೊಲೀಸರು ಆರೋಪಿಗಳಿಂದ ಎರಡು ಪೋರ್ ವೀಲ್ ವಾಹನಗಳು, ಒಂದು ಏರ್ ಪಿಸ್ತೂಲ್, ಕೈಕೋಳಗಳು, ನಕಲಿ ಸಿಬಿಐ ಗುರುತಿನ ಚೀಟಿಗಳು, ಲಾಠಿ ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಹೆಸರಘಟ್ಟ ಮುಖ್ಯರಸ್ತೆಯ ಎಜಿಬಿ ಲೇಔಟ್‌ನಲ್ಲಿ ರೂಮಿನಲ್ಲಿ ಮೂವರು ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಿದ್ದರು. ಸಿಬಿಐ ಅಧಿಕಾರಿಗಳು ಎಂದು ರೂಮಿಗೆ ನುಗ್ಗಿರುವ ಆರೋಪಿಗಳು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಬಳಿಕ ವಿದ್ಯಾರ್ಥಿಗಳಿಗೆ ಗಾಂಜಾ ನೀಡಿ, ವಿಡಿಯೋ ಮಾಡಿಕೊಂಡು, ಬೆದರಿಸಿ ರೂ.3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಡ್ರಗ್ಸ್ ಪೆಡ್ಲರ್‌ಗಳೆಂದು ಬಿಂಬಿಸಲಾಗುತ್ತದೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ನಂತರ ಆರೋಪಿಗಳು ವಿದ್ಯಾರ್ಥಿಗಳಿಂದ 90 ಸಾವಿರ ರೂ.ಗಳನ್ನು ಬಲವಂತವಾಗಿ ಪಡೆದು ಉಳಿದ ಹಣಕ್ಕೆ ವ್ಯವಸ್ಥೆ ಮಾಡುವಂತೆ ಎಚ್ಚರಿಸಿ ಸ್ಥಳದಿಂದ ತೆರಳಿದ್ದಾರೆ.

ಸಂತ್ರಸ್ತರು ಕೂಡ ಕೇರಳ ಮೂಲದವರೇ ಆಗಿದ್ದು, ನಾಲ್ವರು ಆರೋಪಿಗಳ ಪೈಕಿ ಪ್ರಮೋದ್ ಎಂಬಾತ ತನ್ನ ಸಹೋದರಿಯನ್ನು ನೋಡಲು ಬೆಂಗಳೂರಿಗೆ ಬರುತ್ತಿದ್ದ. ಈ ಸಮಯದಲ್ಲಿ ಆರೋಪಿಗಳಾದ ಅನಂತಕೃಷ್ಣ ಮತ್ತು ಆದರ್ಶ್ ನನ್ನು ಭೇಟಿಯಾಗಿದ್ದು, ಸ್ನೇಹಿತರಾಗಿದ್ದಾರೆ. ನಂತರ ಈ ಮೂವರು ನಗರದ ಹೊರವಲಯದಲ್ಲಿ ನೆಲೆಸಿದ್ದ ಕೇರಳದ ಇತರ ವಿದ್ಯಾರ್ಥಿಗಳನ್ನು ದರೋಡೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.